ADVERTISEMENT

ತಿಪಟೂರು: ಕಂದಾಯ ಇಲಾಖೆ ಅಧಿಕಾರಿಗಳ ಎಡವಟ್ಟು, ರೈತನಿಗೆ ಬಿಕ್ಕಟ್ಟು

ಹೆದ್ದಾರಿಗೆ 0.03 ಗುಂಟೆ ವಶ, ಪಹಣಿಯಲ್ಲಿ 1.18 ಗುಂಟೆ ವಶ ಎಂದು ದಾಖಲು

ಸುಪ್ರತೀಕ್.ಎಚ್.ಬಿ.
Published 3 ಜನವರಿ 2024, 6:32 IST
Last Updated 3 ಜನವರಿ 2024, 6:32 IST
ಪೋಟೋ : ತಿಪಟೂರು ತಾಲ್ಲೂಕಿನ ಕಸಬಾ ಹೋಬಳಿ ಮತ್ತಿಹಳ್ಳಿ ಗ್ರಾಮದ ಸರ್ವೆ ನಂಬರ್ 28/2 ರ ಪಹಣಿಯ ಪ್ರತಿ.
ಪೋಟೋ : ತಿಪಟೂರು ತಾಲ್ಲೂಕಿನ ಕಸಬಾ ಹೋಬಳಿ ಮತ್ತಿಹಳ್ಳಿ ಗ್ರಾಮದ ಸರ್ವೆ ನಂಬರ್ 28/2 ರ ಪಹಣಿಯ ಪ್ರತಿ.   

ತಿಪಟೂರು: ಕಂದಾಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ರೈತರೊಬ್ಬರು ಪಹಣಿ ದಾಖಲೆಯಲ್ಲಿ ಸಂಪೂರ್ಣ ಜಮೀನು ಕಳೆದುಕೊಂಡಿದ್ದು ಎರಡು ವರ್ಷಗಳಿಂದ ಕಚೇರಿಗಳಿಗೆ ಅಲೆದರೂ ದಾಖಲೆ ಸರಿಪಡಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ.

ತಿಪಟೂರು ತಾಲ್ಲೂಕಿನ ಕಸಬಾ ಹೋಬಳಿಯ ಮತ್ತಿಹಳ್ಳಿ ಗ್ರಾಮದ ಸದಾಶಿವಯ್ಯ ಅವರ ಒಟ್ಟು ಜಮೀನು 1.18.08 ಗುಂಟೆಯಿದ್ದು ಅದರ ಪೈಕಿ 0.03 ಗುಂಟೆ ಜಮೀನನ್ನು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ನೀಡಲಾಗಿದೆ. ಅದಕ್ಕೆ ತಕ್ಕಂತೆ ಸರ್ಕಾರ ಹಾಗೂ ಪ್ರಾಧಿಕಾರದಿಂದ ರೈತರಿಗೆ ಪರಿಹಾರ ನೀಡಿದೆ. ಆದರೆ ರೈತ ಸದಾಶಿವಯ್ಯರ 1.18.08 ಗುಂಟೆ ಸಂಪೂರ್ಣ ಜಮೀನನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನವದೆಹಲಿಗೆ ಒಳಪಟ್ಟಿದ್ದು ಎಂದು ರೈತನ ಪಹಣಿಯಲ್ಲಿ ದಾಖಲಿಸಲಾಗಿದೆ. ಇತ್ತ ರೈತನಿಗೆ ಸಂಪೂರ್ಣ ಪರಿಹಾರ ಸಿಗದೇ ಭೂಮಿಯನ್ನು ಸ್ವಂತ ಉಳುಮೆ ಮಾಡಲು ಅವಕಾಶವಿಲ್ಲದೆ ಪರಿತಪಿಸುವಂತೆ ಆಗಿದೆ.

ಇದಕ್ಕೆ ಸಂಬಂಧಪಟ್ಟಂತೆ ತುಮಕೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಅಧಿಕಾರಿ ಸಕ್ಷಮ ಪ್ರಾಧಿಕಾರ ಡಿಸೆಂಬರ್ 2022ರಂದು ತಿಪಟೂರಿನ ಉಪವಿಭಾಗಾಧಿಕಾರಿಗೆ ಪತ್ರ ರವಾನೆ ಮಾಡಿದ್ದು ಇದಕ್ಕೆ ಸಂಬಂಧಪಟ್ಟಂತೆ ರೈತ ಸದಾಶಿವಯ್ಯ ಎಲ್ಲ ದಾಖಲಾತಿಗಳನ್ನು ಉಪವಿಭಾಗಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿಗೆ ನೀಡಿದ್ದಾರೆ. ಆದರೆ ಕಳೆದ 2 ವರ್ಷಗಳಿಂದ ಮೂಲ ದಾಖಲಾತಿ ಸರಿಪಡಿಸದೇ ತಾನು ಮಾಡದ ತಪ್ಪಿಗೆ ರೈತ ಸದಾಶಿವಯ್ಯ ಶಿಕ್ಷೆ ಅನುಭವಿಸುತ್ತಿದ್ದಾರೆ.

ADVERTISEMENT

ರೈತನು ಎರಡು ವರ್ಷಗಳಿಂದ ಯಾವುದೇ ಬೆಳೆವಿಮೆ ಪಡೆಯಲಾಗದೆ, ಸರ್ಕಾರದಿಂದ ನೀಡುತ್ತಿರುವ ತುಂತುರು ನೀರಾವರಿ ಘಟಕ, ಹನಿ ನೀರಾವರಿ ಘಟಕಗಳನ್ನು ಪಡೆಯಲಾಗುತ್ತಿಲ್ಲ. ರಾಗಿ ಮತ್ತು ಕೊಬ್ಬರಿಯನ್ನು ನಫೆಡ್‍ಗೆ ಬಿಡಲು ಸಾಧ್ಯವಾಗದೆ, ಬರಗಾಲದ ಪರಿಹಾರ ಪಡೆಯಲು ಸಾಧ್ಯವಾಗುತ್ತಿಲ್ಲ.

ತಾಲ್ಲೂಕಿನ ಕಸಬಾ ಹೋಬಳಿ ಮತ್ತಿಹಳ್ಳಿ ಗ್ರಾಮದ ಸರ್ವೆ ನಂಬರ್ 28/2ರಲ್ಲಿ 668 ಚದರ ಮೀಟರ್‌ನ್ನು ರಾಷ್ಟ್ರೀಯ ಹೆದ್ದಾರಿ 206ಕ್ಕೆ ಭೂಸ್ವಾಧೀನ ಮಾಡಿಕೊಳ್ಳುವ ಬದಲಾಗಿ ರೈತನ ಸಂಪೂರ್ಣ ಜಮೀನನ್ನು (1.18.08 ಗುಂಟೆ) ತುಮಕೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಭೂಸಾಧ್ವೀನಾ ಅಧಿಕಾರಿ ಸಕ್ಷಮ ಪ್ರಾಧಿಕಾರ ವಶಪಡಿಸಿಕೊಂಡಿದ್ದು ರೈತನ ಸ್ವಂತ ಜಮೀನಿನ ಜೊತೆಗೆ ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಲು ವಂಚಿತರಾಗಿದ್ದಾರೆ. ತನ್ನ ಜಮೀನಿಗಾಗಿ ಅಧಿಕಾರಿಗಳನ್ನು ಅಂಗಲಾಚಿದರೂ ವಾಪಸ್ಸು ಸರಿಪಡಿಸುವ ಕೆಲಸ ಮಾಡದೆ ನೊಂದ ರೈತ ಅಧಿಕಾರಿಗಳನ್ನು ಹಾಗೂ ಇಲಾಖೆಯನ್ನು ಪ್ರತಿನಿತ್ಯ ತಿರುಗುತ್ತಿದ್ದು ಯಾವುದೇ ಸೌಲಭ್ಯ, ಬೆಳೆ ಬೆಳೆಯಲು ಸಾಧ್ಯವಾಗದೇ ಕಂಗಾಲಾಗಿದ್ದಾರೆ.

ಕಚೇರಿಯ ಆಧಿಕಾರಿಗಳ ಬಳಿ ಓಡಾಟ ಮಾಡಿ ಸುಸ್ತಾಗಿದೆ. ನನ್ನ ಕಡತವನ್ನು ಉಪವಿಭಾಗಧಿಕಾರಿ ಕಚೇರಿ ಬಳಿ ಕೇಳಿದರೆ ತಹಶೀಲ್ದಾರ್ ಕಚೇರಿಯಲ್ಲಿದೆ ಎಂದು ತಹಶೀಲ್ದಾರ್ ಕಚೇರಿ ಬಳಿ ಕೇಳಿದರೆ ಬಂದಿಲ್ಲವೆಂದು ಹೇಳುತ್ತಿದ್ದಾರೆ. 2 ವರ್ಷಗಳಿಂದ ಅನ್ಯಾಯವಾಗಿದ್ದು ಸರ್ಕಾರದ ರೈತನಿಗೆ ಸಿಗುವ ಎಲ್ಲಾ ಸೌಲಭ್ಯಗಳಿಂದ ವಂಚಿತನಾಗಿದ್ದೇನೆ.
-ಸದಾಶಿವಯ್ಯ, ಜಮೀನು ಕಳೆದುಕೊಂಡ ರೈತ
ಪೋಟೋ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ತುಮಕೂರು - ಶಿವಮೊಗ್ಗ ಘಟಕದಿಂದ ಉಪವಿಭಾಗಾಧಿಕಾರಿಗೆ ಬಂದಿರುವ ಸುತ್ತೋಲೆಯ ಪ್ರತಿ.
ಪೋಟೋ : ಉಪವಿಭಾಗಾಧಿಕಾರಿಯಿಂದ ತಹಶೀಲ್ದಾರ್‍ಗೆ ಕಳುಹಿಸಿರುವ ಸುತ್ತೋಲೆಯ ಪ್ರತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.