ತುಮಕೂರು: ದಸರಾ ಸಮಿತಿಯು ನವರಾತ್ರಿ ಉತ್ಸವ ಅಂಗವಾಗಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಮಲ್ಲಕಂಬ ಪ್ರದರ್ಶನ, ಯೋಗ ಪ್ರದರ್ಶನ ಗಮನ ಸೆಳೆಯಿತು.
ಬೆಂಗಳೂರಿನ ವಿವೇಕಾನಂದ ಕೇಂದ್ರ ವಿದ್ಯಾಲಯದ ಯೋಗ ಗುರು ಪರಪ್ಪ ಅವರ ಶಿಷ್ಯರಾದ 39 ಮಂದಿ ಮಲ್ಲಕಂಬದ ಮೇಲೆ ಯೋಗ ಪ್ರದರ್ಶನ ನೀಡಿದ್ದು ವಿಶೇಷವಾಗಿತ್ತು.
ನಗರದ ಕೆ.ಆರ್.ಬಡಾವಣೆ ಶ್ರೀರಾಮ ಮಂದಿರದ ಆವರಣದಲ್ಲಿ ದಸರಾ ಮಹೋತ್ಸವದ ಅಂಗವಾಗಿ ನವರಾತ್ರಿ ಉತ್ಸವ ನಡೆಯುತ್ತಿದೆ. ಜನಪದ ಗೀತೆಗಳ ಗಾಯನ ಸ್ಪರ್ಧೆಯಲ್ಲಿ 85 ಸ್ಪರ್ಧಿಗಳು ಭಾಗವಹಿಸಿದ್ದರು. ಪ್ರಮುಖರಾದ ಎಸ್.ವಿ.ರಾಮಚಂದ್ರಪ್ಪ, ನರಸೇಗೌಡ, ರಮಾಮಣಿ, ಸವಿತಾ, ರಾಜೇಶ್ವರಿ, ಸುಧೀಂದ್ರಕುಮಾರ್ ಹಿರೇಮಠ್ ಜನಪದ ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ಹಿಂದಿನ ದಿನಗಳಲ್ಲಿ ನಡೆದ ದೇಶ ಭಕ್ತಿ ಗೀತೆಗಳ ನೃತ್ಯ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕ ಟಿ.ಎಸ್.ಗುರುಪ್ರಸಾದ್, ಶುಶ್ರೂಷಕಿ ಜಯಮ್ಮ, ಆಶಾ ಕಾರ್ಯಕರ್ತೆ ರೇಣುಕಾ ಅವರನ್ನು ಗೌರವಿಸಲಾಯಿತು.
ದಸರಾ ಸಮಿತಿ ಕಾರ್ಯಾಧ್ಯಕ್ಷ ಡಾ.ಎಸ್.ಪರಮೇಶ್, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಪತಂಜಲಿ ಯೋಗ ಶಿಕ್ಷಣ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಎ.ಸುರೇಶ್, ಯೋಗ ಶಿಕ್ಷಕ ಪರಪ್ಪ, ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಮಹೇಶ್, ಖಜಾಂಚಿ ಜಿ.ಎಸ್.ಬಸವರಾಜು, ಸಂಯೋಜಕ ಕೆ.ಎನ್.ಗೋವಿಂದರಾವ್, ಕಾರ್ಯದರ್ಶಿಗಳಾದ ಹನುಮಂತರಾಜು, ಕೆ.ಶಂಕರ್, ಜಿ.ಕೆ.ಶ್ರೀನಿವಾಸ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.