ADVERTISEMENT

ಡಿ.ಕೆ.ಶಿವಕುಮಾರ್ ಬಂಧಿಸಿದರೆ ಉಗ್ರ ಹೋರಾಟ

ಕೇಂದ್ರ ಸರ್ಕಾರಕ್ಕೆ ಸಮಾನ ಮನಸ್ಕ ಒಕ್ಕೂಟದ ಪ್ರತಿನಿಧಿಗಳ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 5:08 IST
Last Updated 1 ಸೆಪ್ಟೆಂಬರ್ 2019, 5:08 IST

ತುಮಕೂರು: ‘ಕಾಂಗ್ರೆಸ್ ಪಕ್ಷದ ಎದೆಗಾರಿಕೆ ನಾಯಕ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ’ ಎಂದು ಸಮಾನ ಮನಸ್ಕ ಒಕ್ಕೂಟದ ಪ್ರತಿನಿಧಿಗಳು ಶನಿವಾರ ಆರೋಪಿಸಿದರು.

ಜಾರಿ ನಿರ್ದೇಶನಾಲಯವನ್ನು (ಇ.ಡಿ) ಬಳಸಿಕೊಂಡು ಅವರನ್ನು ಬಂಧಿಸಿದರೆ ಉಗ್ರ ಹೋರಾಟ ನಡೆಸಲಾಗುವುದು. ಮುಂದಾಗುವ ಪರಿಣಾಮಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಹೊಣೆ ಆಗುತ್ತವೆ ಎಂದು ಎಚ್ಚರಿಕೆ ನೀಡಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರತಿನಿಧಿ ಮುರಳೀಧರ ಹಾಲಪ್ಪ, ‘ಮಹಾರಾಷ್ಟ್ರ ಮತ್ತು ಗುಜರಾತಿನ ಕಾಂಗ್ರೆಸ್ ಶಾಸಕರಿಗೆ ನಮ್ಮ ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಅವರು ರಕ್ಷಣೆ ಕೊಟ್ಟಿದ್ದರು. ಈ ಸಿಟ್ಟಿನಿಂದ ಅವರ ಮೇಲೆ ಜಾರಿ ನಿರ್ದೇಶನಾಲಯದ ಮೂಲಕ ದಾಳಿ ಮಾಡಿಸಿ ದ್ವೇಷದ ರಾಜಕಾರಣವನ್ನು ಬಿಜೆಪಿ ಮಾಡುತ್ತಿದೆ’ ಎಂದು ಆರೋಪಿಸಿದರು.

ADVERTISEMENT

’ವಿನಾಯಕ ಚತುರ್ಥಿ ಮುಗಿದ ಬಳಿಕ ಸೆಪ್ಟೆಂಬರ್ 5ರಂದು ಬಂದು ವಿಚಾರಣೆ ಹಾಜರಾಗುತ್ತೇನೆ ಎಂದು ಹೇಳಿದರೂ ಸಹ ವಿಚಾರಣೆಗೆ ಕರೆದುಕೊಂಡು ಹೋಗಲಾಗಿದೆ’ ಎಂದು ಟೀಕಿಸಿದರು.

'ರಮೇಶ್ ಜಾರಕಿಹೊಳಿ ಅವರ ಮೇಲೂ ದಾಳಿ ನಡೆದಿತ್ತು. ಅವರು ಬಿಜೆಪಿಗೆ ಬೆಂಬಲಿಸಿದ್ದರಿಂದ ಅವರ ವಿರುದ್ಧ ದಾಖಲಾದ ಪ್ರಕರಣ ಅಷ್ಟಕ್ಕೆ ನಿಂತು ಹೋಗಿದೆ. ಏನೂ ಕ್ರಮಗಳಾಗಿಲ್ಲ. ಡಿ.ಕೆ.ಶಿವಕುಮಾರ್ ಅವರನ್ನು ಹೆದರಿಸಿ ಕಟ್ಟಿಹಾಕುವ ಭಾಗವಾಗಿ ಈ ಕೃತ್ಯವನ್ನು ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯದ ಮೂಲಕ ಮಾಡುತ್ತಿದೆ' ಎಂದು ಆರೋಪಿಸಿದರು.

ಒಕ್ಕೂಟದ ಸದಸ್ಯ ಸಿದ್ಧಲಿಂಗೇಗೌಡ ಮಾತನಾಡಿ, 'ಪ್ರಧಾನಿ ನರೇಂದ್ರ ಮೋದಿಗೆ ಮತ್ತು ಅಮಿತ್ ಷಾ ಅವರಿಗೆ ವಿರೋಧ ಪಕ್ಷ, ಪ್ರತಿ ಪಕ್ಷಗಳನ್ನು ಮಟ್ಟ ಹಾಕುವುದು, ಪಾಕಿಸ್ತಾನವನ್ನು ಟೀಕಿಸುವುದೇ ಕೆಲಸವಾಗಿದೆ. ಲಕ್ಷಾಂತರ ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ. ಪ್ರವಾಹ ಸಂತ್ರಸ್ತರು ಬೀದಿಪಾಲಾಗಿದ್ದಾರೆ. ರಾಜ್ಯದ 25 ಸಂಸದರಿದ್ದರೂ ಒಬ್ಬರೂ ಮಾತನಾಡಿಲ್ಲ. ಇವರಿಗೆ ಗಂಡೆದೆಯೇ ಇಲ್ಲ' ಎಂದು ಟೀಕಿಸಿದರು.

ಒಕ್ಕೂಟದ ಸದಸ್ಯ ಅತೀಕ್ ಅಹಮ್ಮದ್ ಮಾತನಾಡಿ, 'ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ರಾಜಕೀಯ ದ್ವೇಷ ರಾಜಕಾರಣ ಮಾಡುವುದನ್ನು ಬಿಜೆಪಿ ಬಿಡಬೇಕು. ದೇಶದ ಆರ್ಥಿಕ ಹಿಂಜರಿಕೆ ಸರಿಪಡಿಸಬೇಕು. ಕಾರ್ಮಿಕರು ಸಾಯುವ ಸ್ಥಿತಿಗೆ ಬಂದಿದ್ದಾರೆ’ ಎಂದು ಹೇಳಿದರು.

ಒಕ್ಕೂಟದ ಸದಸ್ಯ ಗುಬ್ಬಿ ಹೊನ್ನಗಿರಿಗೌಡ ಮಾತನಾಡಿ,' ಬಿಜೆಪಿ ನಾಯಕರು ಆಡಳಿತ ಮಾಡುವುದು ಬಿಟ್ಟು ವಿರೋಧ ಪಕ್ಷದ ಎದೆಗಾರಿಕೆ ನಾಯಕರನ್ನು ಬಗ್ಗು ಬಡಿಯುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಸಮರ್ಥ ಒಕ್ಕಲಿಗ ನಾಯಕ ಶಿವಕುಮಾರ್ ಅವರನ್ನು ಮಟ್ಟ ಹಾಕಲು ಹೊರಟಿದ್ದಾರೆ' ಎಂದು ಟೀಕಿಸಿದರು.

'ಅಧಿಕಾರ ಎಂಬುದು ಎಂದೂ ಶಾಶ್ವತವಲ್ಲ ಎಂಬುದನ್ನು ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು. ಸುಧೀರ್ಘ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷ ಎಂದೂ ದ್ವೇಷದ ರಾಜಕಾರಣವನ್ನು ಬೇರೆ ಪಕ್ಷದ ನಾಯಕರ ವಿರುದ್ಧ ಮಾಡಿಲ್ಲ' ಎಂದು ಹೇಳಿದರು.

ಬೆಳ್ಳಿ ಲೋಕೇಶ್, ದೇವಿಕಾ, ನಗುತ ರಂಗನಾಥ್, ಬೋರೇಗೌಡ, ರಾಜಶೇಖರ್ ಇತರರು ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.