ತುರುವೇಕೆರೆ: ಜಿಲ್ಲೆಯಲ್ಲಿ 52 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ, 20 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ನಡೆದ ಇಂದಿರಾ ಕ್ಯಾಂಟೀನ್ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಇಂದಿರಾ ಕ್ಯಾಂಟೀನ್ ತೆರೆಯುವುದರಿಂದ ಸಾಕಷ್ಟು ಬಡವರಿಗೆ ಹಸಿವು ನೀಗಿಸಲು ನೆರವಾಗುತ್ತದೆ. ರಾಜ್ಯದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಗ್ಗೆ 200 ಮಂದಿಗೆ ತಿಂಡಿ, ಮಧ್ಯಾಹ್ನ 200 ಮಂದಿಗೆ ಊಟ, ರಾತ್ರಿ 200 ಮಂದಿಗೆ ಊಟದ ವ್ಯವಸ್ಥೆ ಜಾರಿಯಲ್ಲಿದೆ. ಇದು ಸಾಲದು. ಹೊಟ್ಟೆ ಹಸಿವಿನಿಂದ ನೂರಾರು ಮಂದಿ ಪರದಾಡುತ್ತಾರೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಕೂಡಲೇ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಾಗುವುದು ಎಂದರು.
ರಾಜ್ಯ ಸರ್ಕಾರ ಜಮೀನಿನ ಹಕ್ಕನ್ನು ಜನರಿಗೆ ನೀಡುವ ಮಹತ್ತರ ಹೆಜ್ಜೆ ಇಟ್ಟಿದೆ. ಹಲವು ವರ್ಷಗಳಿಂದ ಭೂಮಿಯ ಹಕ್ಕುದಾರಿಕೆ ಪಡೆಯದೆ ಲಕ್ಷಾಂತರ ಕುಟುಂಬಗಳು ಪರದಾಡುತ್ತಿದ್ದವು. ಇದನ್ನು ಮನಗಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕಂದಾಯ ಸಚಿವ ಕೃಷ್ಣ ಭೈರೇಗೌಡ ಕ್ರಾಂತಿಕಾರಕ ಹೆಜ್ಜೆ ಇಡುವ ಮೂಲಕ ರಾಜ್ಯದ ರೈತರಲ್ಲಿ ಸಂತಸ ತಂದಿದ್ದಾರೆ ಎಂದು ಹೇಳಿದರು.
ತಾಲ್ಲೂಕಿನ ಮಾರಸಂದ್ರದಲ್ಲಿ ಪೋಡಿ ಹಂಚಿಕೆ ಕಾರ್ಯಕ್ರಮದ ವೇಳೆ ನೂರಾರು ರೈತರಿಗೆ ಅವರ ಜಮೀನಿನ ಚಕ್‌ಬಂದಿ ನಿಗದಿ, ನಕ್ಷೆ ತಯಾರು ಮಾಡಿ ಆರ್‌ಟಿಸಿ ಮಾಡಿಸಿ ರೈತರಿಗೆ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ರೈತರಿಗೆ ಪೋಡಿ ಮಾಡಿಸಬೇಕಿದೆ. ಇದರಿಂದ ಕಾನೂನು ತೊಡಕು ನಿವಾರಣೆ ಆಗಲಿದೆ ಎಂದರು.
ತಾಲ್ಲೂಕಿ ಬಾಣಸಂದ್ರದ ಬಳಿಯ ರಂಗನಾಥ ನಗರದಲ್ಲಿದ್ದ 350 ಮಂದಿಗೆ ಕಂದಾಯ ಗ್ರಾಮದ ಹಕ್ಕುಪತ್ರ ವಿತರಿಸಿದರು.
ಬಡ ಜನರ ಅಭಿವೃದ್ಧಿ ಆಗದೇ ಬರಿ ರಸ್ತೆ, ಡ್ಯಾಂ ನಿರ್ಮಾಣವಾದರೆ ಪ್ರಯೋಜನವೇನು? ಮೊದಲು ಹಸಿದ ಹೊಟ್ಟೆಯನ್ನು ತುಂಬಿಸುವ ಕಾರ್ಯ ಮಾಡಬೇಕು. ನಂತರ ಉಳಿದದ್ದು. ಎತ್ತಿನಹೊಳೆ ಯೋಜನೆ ಇನ್ನು ಎರಡು ವರ್ಷಗಳಲ್ಲಿ ಪೂರ್ಣಗೊಂಡರೆ ಅದಕ್ಕಿಂತ ಅಭಿವೃದ್ಧಿ ಬೇಕೆ ಎಂದು ಪ್ರಶ್ನಿಸಿದರು.
ಶಾಸಕ ಎಂ.ಟಿ. ಕೃಷ್ಣಪ್ಪ ಮಾತನಾಡಿ, ‘ಪ್ರಾರಂಭದಲ್ಲಿ ಶುಚಿಯಾಗಿ ಮಾಡಿದ್ದೀರಾ. ಮಂದೆ ಇದೇ ಪ್ರಕಾರವೇ ಶುದ್ಧ, ರುಚಿಕರವಾಗಿರಬೇಕು. ನಾನು ದಿಢೀರನೇ ಬರ್ತಿನಿ. ಅವತ್ತೂ ಇದೇ ಪ್ರಕಾರ ಇದ್ದರೆ ಓಕೆ. ಇಲ್ಲದಿದ್ದರೆ, ನಾನು ಸುಮ್ಮನಿರುವ ವ್ಯಕ್ತಿ ಅಲ್ಲ. ಗೊತ್ತಿರಲಿ’ ಎಂದು ಗುತ್ತಿಗೆದಾರರಿಗೆ ಎಚ್ಚರಿಸಿದರು.
ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಭು, ಎಸ್ಪಿ ಅಶೋಕ್, ಉಪ ವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ಎನ್.ಎ.ಕುಂಇ ಅಹಮದ್, ವಿಧಾನ ಪರಿಷತ್ ಮಾಜಿ ಸದಸ್ಯ ಬೆಮಲ್ ಕಾಂತರಾಜ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶೀಲಾ ಶಿವಪ್ಪ ನಾಯಕ, ಉಪಾಧ್ಯಕ್ಷೆ ಭಾಗ್ಯ ಮಹೇಶ್, ಸದಸ್ಯರು, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ರಾಜಣ್ಣ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.