ADVERTISEMENT

ಔಷಧಿ ವ್ಯಾಪಾರಿಗಳಿಗೆ ದಂಡ: ಖಂಡನೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 11:19 IST
Last Updated 14 ಮಾರ್ಚ್ 2020, 11:19 IST

ತುಮಕೂರು: ಮುಖಗವಸು(ಮಾಸ್ಕ್‌)ಗಳನ್ನು ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ ಎಂದು ಔಷಧ ವ್ಯಾಪಾರಿಗಳಿಗೆ ದಂಡ ವಿಧಿಸಿರುವ ಕ್ರಮವನ್ನು ತುಮಕೂರು ಜಿಲ್ಲಾ ಔಷಧ ವ್ಯಾಪರಿಗಳ ಸಂಘ ಖಂಡಿಸಿದೆ.

ಬೆಂಗಳೂರಿನ ಜಿಎಸ್‍ಟಿ ಮುಖ್ಯಕಚೇರಿಯ ಜಾಗೃತದಳದ ಅಧಿಕಾರಿಗಳು ತುಮಕೂರಿನ ಎಂ.ಜಿ ರಸ್ತೆಯ 5 ಮೆಡಿಕಲ್‌ಗಳಲ್ಲಿ ಕಾರ್ಯಾಚರಣೆ ನಡೆಸಿ, ಮಾರಾಟದ ರಸೀದಿ ನೀಡಿಲ್ಲ ಎಂಬ ನೆಪವೊಡ್ಡಿ ಒಬ್ಬೊಬ್ಬರಿಗೆ ₹20 ಸಾವಿರ ದಂಡ ವಿಧಿಸಿದ್ದಾರೆ. ಇದು ಅತ್ಯಂತ ಅಮಾನವೀಯ ಎಂದು ಸಂಘದ ಕಾರ್ಯದರ್ಶಿ ಎನ್.ಎಸ್.ಪಂಡಿತ್ ಜವಹರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊರೊನಾ ವೈರೆಸ್ ಪ್ರಾರಂಭದ ನಂತರ ಮುಖಗವಸು ಕಂಪನಿಗಳಿಂದ ನಮಗೆ ಸರಿಯಾಗಿ ಸರಬರಾಜು ಆಗಿಲ್ಲ. ಕಡಿಮೆ ಸಂಖ್ಯೆಯಲ್ಲಿ ಪೂರೈಕೆ ಆಗುತ್ತಿರುವ ಮುಖಗವಸುಗಳನ್ನು ನಿರ್ಧರಿತ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ವಾಸ್ತವಾಂಶ ಹೀಗಿರುವಾಗ ಮಾರಾಟದ ರಸೀದಿ ಕೊಡಲಿಲ್ಲ ಎಂಬ ಕಾರಣಕ್ಕಾಗಿ ದಂಡ ವಿಧಿಸಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.

ADVERTISEMENT

ಕಳೆದ ಮೂರ್ನಾಲ್ಕು ವರ್ಷಗಳಿಂದ ನಿಗದಿತ ವ್ಯಾಪಾರ ಆಗದೆ ವ್ಯಾಪಾರಿಗಳು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದಾರೆ. ರಿಯಾಯಿತಿ ವ್ಯಾಪಾರಕ್ಕೆ ಪೈಪೋಟಿ ನೀಡಲಾಗದೆ ತೊಂದರೆಯಲ್ಲಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಏನೂ ಪ್ರಯೋಜನವಾಗಿಲ್ಲ. ಇಂತಹ ಸಂದರ್ಭದಲ್ಲಿ ಏನೂ ತಪ್ಪು ಮಾಡದ ಸಣ್ಣ ವ್ಯಾಪಾರಿಗಳಿಗೆ ಈ ರೀತಿಯ ದೊಡ್ಡ ದಂಡಶುಲ್ಕ ವಿಧಿಸುವುದು ನೋವುಂಟು ಮಾಡಿದೆ ಎಂದಿದ್ದಾರೆ.

ಔಷಧ ವ್ಯಾಪಾರಿಗಳಿಗೆ ಇದೇ ರೀತಿಯ ಕಿರುಕುಳ ಮುಂದುವರೆದರೆ ಸಾವಿರಾರು ಔಷಧ ವ್ಯಾಪಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಕೂರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.