
ತುಮಕೂರು: ಅಪಘಾತದಲ್ಲಿ ಕೈ ಬೆರಳು ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರಿಗೆ ಕಾಲಿನ ಬೆರಳು ಕತ್ತರಿಸಿ ಜೋಡಿಸುವಲ್ಲಿ ನಗರದ ಸಿದ್ಧಗಂಗಾ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.
ಕೆಲಸ ಮಾಡುವಾಗ ಆಕಸ್ಮಿಕವಾಗಿ ಯಂತ್ರಕ್ಕೆ ಸಿಲುಕಿ ವ್ಯಕ್ತಿಯೊಬ್ಬರು ತಮ್ಮ ಬಲಗೈನ ಐದು ಬೆರಳಿಗೆ ಹಾನಿ ಮಾಡಿಕೊಂಡಿದ್ದರು. ಹೆಬ್ಬೆರಳು ಇಲ್ಲದೆ ಯಾವುದೇ ಕೆಲಸ ಮಾಡಲು, ವಸ್ತುಗಳನ್ನು ಹಿಡಿಯುವುದು ಕಷ್ಟಕರವಾಗಿತ್ತು. ಇದರಿಂದ ಅವರು ದೈನಂದಿನ ಕೆಲಸಗಳಿಗೂ ಪರದಾಡುವಂತಾಗಿತ್ತು.
ಇದನ್ನು ಸವಾಲಾಗಿ ಸ್ವೀಕರಿಸಿದ ವೈದ್ಯರ ತಂಡ ಸತತ 12 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಕಾಲಿನ ಬೆರಳು ತೆಗೆದು, ಬಲಗೈನ ಹೆಬ್ಬೆರಳಿಗೆ ಜೋಡಿಸುವಲ್ಲಿ ಯಶಸ್ವಿಯಾಗಿದೆ. ಪ್ಲಾಸ್ಟಿಕ್ ಸರ್ಜನ್‍ಗಳಾದ ಡಾ.ಕೆ.ಮಧುಸೂದನ್, ಡಾ.ಉದಯ್, ಅರಿವಳಿಕೆ ತಜ್ಞರಾದ ಡಾ.ಶಶಿಕಿರಣ್, ಡಾ.ನಾಗಭೂಷಣ್ ನೇತೃತ್ವದ ತಂಡ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.
ಸೂಕ್ಷ್ಮದರ್ಶಕ ಬಳಸಿ ಅತೀ ಸಣ್ಣ ರಕ್ತನಾಳಗಳು, ನರಗಳನ್ನು ಒಂದೊಂದಾಗಿ ಜೋಡಿಸುವ ಈ ಸಂಕೀರ್ಣ ಪ್ರಕ್ರಿಯೆಗೆ 12 ಗಂಟೆ ಸಮಯ ತೆಗೆದುಕೊಂಡಿತು. ಕೊನೆಗೂ ಯಶಸ್ಸುಕಂಡಿದೆ ಎಂದು ಡಾ.ಮಧುಸೂದನ್
ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.