ADVERTISEMENT

ತುಮಕೂರು: ಚೇತರಿಕೆ ಕಂಡ ಮೀನು ಕೃಷಿ

ಇಂದು ಮೀನು ಕೃಷಿಕರ ದಿನಾಚರಣೆ; 54,001 ಹೆಕ್ಟೇರ್‌ ಜಲ ವಿಸ್ತೀರ್ಣದಲ್ಲಿ ಮೀನುಗಾರಿಕೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 5:08 IST
Last Updated 10 ಜುಲೈ 2025, 5:08 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ಮಳೆ ಕೊರತೆ, ಕೆರೆ, ಜಲಾಶಯದಲ್ಲಿ ನೀರಿನ ಸಂಗ್ರಹವಿಲ್ಲದ ಕಾರಣಕ್ಕೆ ಇಳಿಕೆ ಕಂಡಿದ್ದ ಮೀನು ಉತ್ಪಾದನೆ ಚೇತರಿಕೆ ಕಾಣುತ್ತಿದ್ದು, ಜಿಲ್ಲೆಯಲ್ಲಿ ವರ್ಷಕ್ಕೆ 33 ಸಾವಿರ ಟನ್‌ ಮೀನು ಉತ್ಪಾದನೆಯಾಗುತ್ತಿದೆ.

ಮೀನುಗಾರಿಕೆ ಇಲಾಖೆ ಅಂಕಿ–ಅಂಶದ ಪ್ರಕಾರ ಜಿಲ್ಲೆಯಾದ್ಯಂತ 30 ಸಾವಿರಕ್ಕೂ ಹೆಚ್ಚು ಮೀನುಗಾರರಿದ್ದಾರೆ. ಇದರಲ್ಲಿ 12,250 ಮಂದಿ ನಿರಂತರವಾಗಿ ಮೀನು ಸಾಕಾಣಿಕೆ, ಮಾರಾಟದಲ್ಲಿ ತೊಡಗಿಸಿದ್ದಾರೆ. ಉಳಿದ 17,750 ಜನ ಅರೆಕಾಲಿಕ ಕೆಲಸವಾಗಿ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಕುಸಿತವಾಗಿದ್ದ ಮೀನು ಉತ್ಪಾದನೆ ಈಗ ಏರಿಕೆಯತ್ತ ಹೆಜ್ಜೆ ಹಾಕಿದೆ.

2022–23ನೇ ಸಾಲಿನಲ್ಲಿ 26,277 ಟನ್‌ ಮೀನು ಉತ್ಪಾದನೆಯಾಗಿತ್ತು, 2024–25ರಲ್ಲಿ 33,501 ಟನ್‌ಗೆ ಹೆಚ್ಚಳವಾಗಿದೆ. ಕೃಷಿ, ಹೈನುಗಾರಿಕೆ ನಂತರ ಮೀನು ಸಾಕಾಣಿಕೆ ಕಡೆಗೆ ಜನ ಆಸಕ್ತಿ ತೋರುತ್ತಿದ್ದಾರೆ. ಜಿಲ್ಲೆಯ 30 ಮೀನುಗಾರಿಕೆ ಸಹಕಾರ ಸಂಘಗಳಲ್ಲಿ 9,046 ಸದಸ್ಯರು ನೋಂದಣಿಯಾಗಿದ್ದಾರೆ. ಗುಬ್ಬಿ, ಪಾವಗಡ, ತುರುವೇಕೆರೆ ಸೇರಿ ಮೂರು ಕಡೆಗಳಲ್ಲಿ ಮೀನು ಉತ್ಪಾದಕರ ಸಂಸ್ಥೆ ಶುರು ಮಾಡಲಾಗಿದೆ. ಮೀನುಗಾರರ ಬದುಕು ಸುಧಾರಣೆ, ಆಧುನಿಕ ಸೌಲಭ್ಯ ಕಲ್ಪಿಸಲು ಇಲಾಖೆ ಹೆಜ್ಜೆ ಇಟ್ಟಿದೆ. ಅಗತ್ಯ ಸಲಕರಣೆ ವಿತರಿಸುವ ಕೆಲಸವಾಗುತ್ತಿದೆ.

ADVERTISEMENT

ಕೆರೆ, ಜಲಾಶಯ ಸಹಿತ ಒಟ್ಟು 54,001 ಹೆಕ್ಟೇರ್‌ ಜಲ ವಿಸ್ತೀರ್ಣದಲ್ಲಿ ಮೀನುಗಾರಿಕೆ ಮಾಡಲಾಗುತ್ತಿದೆ. ಕುಣಿಗಲ್‌ ತಾಲ್ಲೂಕಿನ ಮಂಗಳ, ಮಾರ್ಕೋನಹಳ್ಳಿ ಜಲಾಶಯ, ಕೊರಟಗೆರೆಯ ತೀತಾ, ಚಿಕ್ಕನಾಯಕನಹಳ್ಳಿಯ ಬೋರನಕಣಿವೆ ಜಲಾಶಯದಲ್ಲಿ ಮೀನುಗಾರಿಕೆಗೆ ಅವಕಾಶ ಇದೆ. ಈ ನಾಲ್ಕು ಕಡೆಗಳಲ್ಲಿ 3,078 ಹೆಕ್ಟೇರ್‌ ಜಲ ವಿಸ್ತೀರ್ಣದಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡಲಾಗಿದೆ.

ಮೀನುಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ 31,337 ಹೆಕ್ಟೇರ್‌ ಜಲ ವಿಸ್ತೀರ್ಣ ಇರುವ 402 ಕೆರೆ, ಗ್ರಾಮ ಪಂಚಾಯಿತಿಗೆ ಸೇರಿದೆ 1,388 ಕೆರೆಗಳಿದ್ದು, 19,586 ಹೆಕ್ಟೇರ್‌ ಜಲ ವಿಸ್ತೀರ್ಣ ಹೊಂದಿದೆ. ಕಳೆದ ಆರ್ಥಿಕ ವರ್ಷದಲ್ಲಿ ತುಮಕೂರು ತಾಲ್ಲೂಕಿನಲ್ಲಿ ಹೆಚ್ಚಿನ ಮೀನು ಉತ್ಪಾದನೆಯಾಗಿದೆ, ಕುಣಿಗಲ್‌ ನಂತರದ ಸ್ಥಾನ ಪಡೆದಿದೆ.

33 ಸಾವಿರ ಟನ್‌ ಮೀನು ಉತ್ಪಾದನೆ 50ರಷ್ಟು ಭರ್ತಿಯಾದ ಕೆರೆಯಲ್ಲಿ ಮೀನುಗಾರಿಕೆ | ಇ–ಟೆಂಡರ್‌ ಮುಖಾಂತರ ಕೆರೆ ಹಂಚಿಕೆ

ಕೆರೆ ಹರಾಜಿಗೆ ಇ–ಟೆಂಡರ್

ಶೇ 50ರಷ್ಟು ಭರ್ತಿಯಾದ ಕೆರೆಗಳಲ್ಲಿ ಮಾತ್ರ ಮೀನುಗಾರಿಕೆಗೆ ಅನುಮತಿ ಕೊಡಲಾಗುತ್ತಿದೆ. ಈ ಹಿಂದೆ ಹರಾಜು ಮುಖಾಂತರ ಕೆರೆ ನೀಡಲಾಗುತ್ತಿತ್ತು. ಆಗ ಯಾರು ಬೇಕಾದರೂ ಭಾಗವಹಿಸಿ ಮೀನು ಸಾಕಾಣಿಕೆಗೆ ಕೆರೆ ಪಡೆದುಕೊಳ್ಳಬಹುದಿತ್ತು. ಅತ್ಯಂತ ಕಡಿಮೆ ಬೆಲೆಗೆ ಕೆರೆ ಹರಾಜು ಹಾಕಲಾಗುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿದ್ದವು. ಇದನ್ನು ತಡೆಯುವ ಉದ್ದೇಶದಿಂದ ಇ–ಟೆಂಡರ್‌ ಮುಖಾಂತರ ಕೆರೆ ಹಂಚಿಕೆ ಮಾಡಲಾಗುತ್ತಿದೆ. ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿ ಕೆರೆ ಪಡೆಯಲು ಅವಕಾಶ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.