ADVERTISEMENT

ತೃತೀಯ ಲಿಂಗಿಗಳಿಗೆ ಆಹಾರ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 14:14 IST
Last Updated 22 ಏಪ್ರಿಲ್ 2020, 14:14 IST
ತೃತೀಯ ಲಿಂಗಿಗಳಿಗೆ ನಡೆದ ಆಹಾರಧಾನ್ಯ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು
ತೃತೀಯ ಲಿಂಗಿಗಳಿಗೆ ನಡೆದ ಆಹಾರಧಾನ್ಯ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು   

ತುಮಕೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ನಗರದ ತೃತೀಯ ಲಿಂಗಿಗಳಿಗೆ ಕೊಳೆಗೇರಿ ಸಮಿತಿಯಿಂದ ಬುಧವಾರ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು.

ಸಮಿತಿ ಗೌರವಾಧ್ಯಕ್ಷೆ ದೀಪಿಕಾ ಮಾತನಾಡಿ, ‘ನಮ್ಮ ಸಮುದಾಯವನ್ನು ಸಮಾಜವು ತಾತ್ಸಾರದಿಂದ ನೋಡುತ್ತಿದೆ. ನಮ್ಮ ದೇಹದಲ್ಲಾದ ಬದಲಾವಣೆಯಿಂದ ಕುಟುಂಬಗಳಿಂದ ಬೇರ್ಪಟ್ಟಿದ್ದೇವೆ. ಕಳೆದ 30 ದಿನಗಳ ಲಾಕ್‍ಡೌನ್‌ನಿಂದ ಬದುಕು ಕಷ್ಟಕ್ಕೆ ಸಿಲುಕಿದೆ’ ಎಂದರು.

ಜಿಲ್ಲಾಡಳಿತ ಇದುವರೆಗೂ ಯಾವುದೇ ಸಹಾಯ ಮಾಡಿಲ್ಲ. ಹೈಕೋರ್ಟ್ ನಿರ್ದೇಶನ ಇದ್ದರೂ ಸರ್ಕಾರದಿಂದ ಆಹಾರ ಧಾನ್ಯಗಳು, ವೈದ್ಯಕೀಯ ಸೌಲಭ್ಯಗಳು ದೊರೆತಿಲ್ಲ ಎಂದರು.

ADVERTISEMENT

ಸ್ಲಂ ಜನಾಂದೋಲನ ಸಮಿತಿ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ‘ತೃತೀಯ ಲಿಂಗಿಗಳು ಲಾಕ್‍ಡೌನ್‌ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ಲೈಂಗಿಕ ಅಲ್ಪಸಂಖ್ಯಾತರು ತಮ್ಮ ಮನೆಗಳಿಗೆ ತೆರಳಿದ್ದರೂ ಅವರನ್ನು ಅವರ ಕುಟುಂಬ ಒಪ್ಪಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

25 ತೃತೀಯ ಲಿಂಗಿಗಳಿಗೆ ತಲಾ 25 ಕೆ.ಜಿ ಅಕ್ಕಿ, 3ಕೆ.ಜಿ ತೊಗರಿಬೇಳೆ, 1ಕೆ.ಜಿ ಬೆಲ್ಲ, 2 ಕೆ.ಜಿ ಎಣ್ಣೆ, 1ಕೆ.ಜಿ ಸಕ್ಕರೆ, 1ಕೆ.ಜಿ ಉಪ್ಪು, ಅರ್ಧ ಕೆ.ಜಿ ಸಾಂಬಾರ್ ಪುಡಿ, 1ಕೆ.ಜಿ ಕಡ್ಲೆಬೀಜ, 3 ಮೈಸೋಪ್, 2 ಬಟ್ಟೆ ಸೋಪ್ ನೀಡಲಾಗಿದೆ ಎಂದರು.

ಹಸಿರುದಳ ಸಂಸ್ಥೆಯ ವಿಶ್ವನಾಥ್, ಕೊಳೆಗೇರಿ ಸಮಿತಿ ಪದಾಧಿಕಾರಿಗಳಾದ ಶೆಟ್ಟಾಳಯ್ಯ, ಅರುಣ, ಗೋಪಾಲ್, ಸಹಬಾಳ್ವೆ ಸಂಸ್ಥೆಯ ದಿವ್ಯಾ, ಶಬ್ಬು, ಲಿಲ್ಲಿ, ಸೋನು, ಮಾನ್ಯ, ವಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.