ತುಮಕೂರು: ಕೊರಟಗೆರೆ ತಾಲ್ಲೂಕು ಬಜ್ಜನಹಳ್ಳಿಯ ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ರಾಷ್ಟ್ರೀಯ ಬುಡಕಟ್ಟು ಬೇಡರ ಪಡೆ ಒತ್ತಾಯಿಸಿದೆ.
ಅಭಿಷೇಕ್ ಎಂಬ ವಿದ್ಯಾರ್ಥಿ ಮಲಗಿದ್ದಲ್ಲೇ ಉಸಿರು ಚೆಲ್ಲಿದ್ದರು. ಈ ಸಾವು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಮೂಗಿನಿಂದ ರಕ್ತ, ಬಾಯಿಯಿಂದ ನೊರೆ ಬಂದಿದೆ. ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈವರೆಗೆ ನಿಖರ ಕಾರಣ ಬಹಿರಂಗಪಡಿಸಿಲ್ಲ. ಜಿಲ್ಲಾ ಆಡಳಿತ ಪ್ರಕರಣ ಮುಚ್ಚಿ ಹಾಕಲು ಹೊರಟಿದೆ ಎಂದು ಬೇಡರ ಪಡೆಯ ರಾಷ್ಟ್ರೀಯ ಅಧ್ಯಕ್ಷ ಮರಳೂರು ನಾಗರಾಜು, ರಾಜ್ಯ ಅಧ್ಯಕ್ಷ ಮಾರಣ್ಣ ಪಾಳೇಗಾರ ಆರೋಪಿಸಿದ್ದಾರೆ.
‘ವಿದ್ಯಾರ್ಥಿ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ನೀಡಿದ ಭರವಸೆ ಈಡೇರಿಲ್ಲ. ಎಫ್‌ಎಸ್‌ಎಲ್ ವರದಿ ಬರುವ ತನಕ ಕಾಯದೆ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.