ADVERTISEMENT

ಪಾರ್ಟ್‌ಟೈಮ್‌ ಕೆಲಸದ ಆಮಿಷ: ಮಹಿಳೆಗೆ ₹28.11 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2024, 3:25 IST
Last Updated 7 ಫೆಬ್ರುವರಿ 2024, 3:25 IST
ವಂಚನೆ
ವಂಚನೆ   

ಸಾಂದರ್ಭಿಕ ಚಿತ್ರ

ತುಮಕೂರು: ಸೈಬರ್‌ ವಂಚಕರು ಒಡ್ಡಿದ ಪಾರ್ಟ್‌ಟೈಮ್‌ ಕೆಲಸದ ಆಮಿಷಕ್ಕೆ ಒಳಗಾದ ನಗರದ ಮಹಿಳೆಯೊಬ್ಬರು ₹28.11 ಲಕ್ಷ ಕಳೆದುಕೊಂಡಿದ್ದಾರೆ.

ಜ.29ರಂದು ವಾಟ್ಸ್‌ ಆ್ಯಪ್‌ನಲ್ಲಿ ಆನ್‌ಲೈನ್‌ ವಂಚಕರು ಕಳಿಸಿದ ‘ಪಾರ್ಟ್‌ ಟೈಮ್‌ ಕೆಲಸ ಮಾಡುತ್ತಾ, ಹೆಚ್ಚು ಹಣ ಗಳಿಸಬಹುದು’ ಎಂಬ ಮೆಸೇಜ್‌ ನಂಬಿ ಶಾಂತಿ ನಗರದ ಮಹಿಳೆಯು ಹಣ ಕಳೆದುಕೊಂಡಿದ್ದಾರೆ.  

ADVERTISEMENT

ಪಾರ್ಟ್‌ ಟೈಮ್‌ ಕೆಲಸದ ಭಾಗವಾಗಿ ವಂಚಕರು ಕೆಲವು ಹೋಟೆಲ್‌ ಲಿಂಕ್‌ ಕಳಿಸಿ ರೇಟಿಂಗ್ಸ್‌ ನೀಡುವಂತೆ ತಿಳಿಸಿದ್ದಾರೆ. ರೇಟಿಂಗ್ಸ್‌ ಟಾಸ್ಕ್‌ ಪೂರ್ಣಗೊಳಿಸಿದ  ಮಹಿಳೆಯ ಖಾತೆಗೆ ಹಂತ ಹಂತವಾಗಿ ₹203, ₹150, ₹150 ವರ್ಗಾವಣೆ ಮಾಡಿದ್ದಾರೆ.

ಹೆಚ್ಚಿನ ಲಾಭ ಗಳಿಸಲು ಮತ್ತಷ್ಟು ಹಣ ಹೂಡಿಕೆ ಮಾಡುವಂತೆ ತಿಳಿಸಿ ಕೆಲವೊಂದು ಲಿಂಕ್‌ ಕಳುಹಿಸಿದ್ದಾರೆ. ನಂತರ ಬ್ಯಾಂಕ್‌ ಖಾತೆಗಳನ್ನು ನೀಡಿ ಹಣ ಹೂಡಿಕೆ ಮಾಡಿ, ಟಾಸ್ಕ್‌ ಪಡೆಯುವಂತೆ ತಿಳಿಸಿದ್ದಾರೆ.

ಇದನ್ನು ನಂಬಿದ ಮಹಿಳೆ ವಿವಿಧ ಬ್ಯಾಂಕ್‌ ಖಾತೆ ಮತ್ತು ಯುಪಿಐ ಐ.ಡಿಗಳಿಗೆ ಒಟ್ಟು ₹28.18 ಲಕ್ಷ ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ಕೇವಲ ₹6,443 ಮಹಿಳೆಯ ಖಾತೆಗೆ ವರ್ಗಾವಣೆಯಾಗಿದೆ. ಬಾಕಿ ಹಣ ವಾಪಸ್‌ ಕೊಡಿಸುವಂತೆ ಕೋರಿ ಸೈಬರ್‌ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೈಬರ್‌ ಅಪರಾಧ ಪ್ರಕರಣಗಳಿಗೆ ಕಡಿವಾಣ ಬೀಳುತ್ತಿಲ್ಲ. ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಸಾರ್ವಜನಿಕರು ಎಚ್ಚೆತ್ತುಕೊಳ್ಳುತ್ತಿಲ್ಲ. ವಿದ್ಯಾವಂತರು ಮತ್ತು ಮಹಿಳೆಯರೇ ಹೆಚ್ಚಾಗಿ ಸೈಬರ್‌ ವಂಚನೆಗೆ ಒಳಗಾಗುತ್ತಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.