ತುಮಕೂರು: ನೇಕಾರರ ವಿಶೇಷ ಯೋಜನೆಯಡಿ ಮಗ್ಗಗಳಿಗೆ ಉಚಿತವಾಗಿ ವಿದ್ಯುತ್ ನೀಡಲು ಸರ್ಕಾರ ನಿರ್ಧರಿಸಿದ ನಂತರ ಜಿಲ್ಲೆಯಲ್ಲಿ ಕೈಮಗ್ಗಗಳು ಮೂಲೆ ಸೇರುತ್ತಿದ್ದು, ವಿದ್ಯುತ್ ಮಗ್ಗಗಳ ಸಂಖ್ಯೆ ಹೆಚ್ಚುತ್ತಿದೆ.
2023–24ನೇ ಸಾಲಿನಲ್ಲಿ ಜಿಲ್ಲೆಯಾದ್ಯಂತ 6,187 ಕೈಮಗ್ಗಗಳಿದ್ದವು. ಒಂದು ವರ್ಷದಲ್ಲಿ ಅರ್ಧದಷ್ಟು ಕಡಿಮೆಯಾಗಿದ್ದು, 2024–25ನೇ ಆರ್ಥಿಕ ವರ್ಷ ಮುಗಿಯುವ ಹೊತ್ತಿಗೆ 3,950 ಮಗ್ಗಗಳು ಮಾತ್ರ ಉಳಿದಿವೆ. 2020–21ರಲ್ಲಿ 3,104 ವಿದ್ಯುತ್ ಮಗ್ಗಗಳಿದ್ದವು, ಈಗ 5,689ಕ್ಕೆ ಬಂದು ನಿಂತಿದೆ. ಮುಂದಿನ ದಿನಗಳಲ್ಲಿ ಇವುಗಳ ಬಳಕೆ ಮತ್ತಷ್ಟು ಹೆಚ್ಚಾಗಬಹುದು ಎಂದು ನೇಕಾರರು ಅಂದಾಜಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಗ್ಗಗಳಿಗೆ ಉಚಿತವಾಗಿ ವಿದ್ಯುತ್ ನೀಡುವ ಯೋಜನೆ ಜಾರಿಗೊಳಿಸಿದ್ದು, 10 ಎಚ್.ಪಿ ವರೆಗಿನ ಮಗ್ಗ ಮತ್ತು ಮಗ್ಗ ಪೂರ್ವ ಘಟಕಗಳಿಗೆ 250 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. 10ರಿಂದ 20 ಎಚ್.ಪಿ ವರೆಗಿನ ಮಗ್ಗ ಮತ್ತು ಮಗ್ಗ ಪೂರ್ವ ಘಟಕಗಳಿಗೆ ಪ್ರತಿ ಯುನಿಟ್‌ಗೆ ₹1.25 ನಿಗದಿ ಪಡಿಸಲಾಗಿದೆ. ಇದರಿಂದ ಹೆಚ್ಚಿನ ನೇಕಾರರು ವಿದ್ಯುತ್ ಮಗ್ಗಗಳ ಅಳವಡಿಕೆ ಕಡೆಗೆ ಆಸಕ್ತಿ ವಹಿಸಿದ್ದಾರೆ.
ಕೈಮಗ್ಗದಲ್ಲಿ ಒಂದು ತಿಂಗಳಿನಲ್ಲಿ 6ರಿಂದ 7 ಸೀರೆ ನೇಯಬಹುದು. ವಿದ್ಯುತ್ ಮಗ್ಗದಲ್ಲಿ 40ರಿಂದ 45 ಸೀರೆ ತಯಾರಿಸಬಹುದು. ಇದರ ಜತೆಗೆ ವಿದ್ಯುತ್ ಕೂಡ ಉಚಿತವಾಗಿ ಸಿಗುತ್ತಿದೆ. ಇದೇ ಕಾರಣಕ್ಕೆ ಹೆಚ್ಚಿನ ನೇಕಾರರು ವಿದ್ಯುತ್ ಮಗ್ಗ ಅಳವಡಿಕೆಗೆ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ರೇಷ್ಮೆ ಸೀರೆ ಜತೆಗೆ ಕಂಬಳಿ, ರತ್ನಗಂಬಳಿ, ಪೂಜಾ ಕಂಬಳಿ ನೇಯಲಾಗುತ್ತಿದೆ. ವಿವಿಧ ಉತ್ಪನ್ನಗಳಿಗೆ ಬೇಡಿಕೆಯೂ ಹೆಚ್ಚಿದೆ.
ಪಾವಗಡ, ವೈ.ಎನ್.ಹೊಸಕೋಟೆ, ಚಿಕ್ಕನಾಯಕನಹಳ್ಳಿ, ಶಿರಾ, ಗುಬ್ಬಿ ಭಾಗದಲ್ಲಿ ಇನ್ನೂ ಕೈಮಗ್ಗಗಳು ಜೀವಂತವಾಗಿವೆ. ವೈ.ಎನ್.ಹೊಸಕೋಟೆ, ಕಲ್ಲೂರು ಸೀರೆಗಳು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿವೆ. ಇಲ್ಲಿ ತಯಾರಾದ ಸೀರೆಗಳು ಭಾರತದ ವಿವಿಧ ರಾಜ್ಯಗಳಿಗೆ ಸರಬರಾಜಾಗುತ್ತಿವೆ. ನೇಕಾರರು ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಸೀರೆ ನೇಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಗ್ರಾಹಕರನ್ನು ಸೆಳೆಯಲು ಹೊಸ ಹೊಸ ವಿಧಾನ ಅನುಸರಿಸುತ್ತಿದ್ದಾರೆ. ವಿವಿಧ ಬಗೆಯ ವಿನ್ಯಾಸ ಹೊಂದಿರುವ ಸೀರೆ ತಯಾರಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಕೈಮಗ್ಗದಿಂದ ತಯಾರಿಸಿದ ಒಂದು ರೇಷ್ಮೆ ಸೀರೆಗೆ ₹6 ಸಾವಿರದಿಂದ ₹40 ಸಾವಿರದವರೆಗೆ ಬೆಲೆ ಇದೆ. ರೇಷ್ಮೆ ಬೆಲೆ ಆಧರಿಸಿ ಸೀರೆಗಳಿಗೆ ಬೆಲೆ ನಿಗದಿ ಪಡಿಸಲಾಗುತ್ತದೆ.
ಕೈಮಗ್ಗ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆಯ ವ್ಯವಸ್ಥೆ ಇಲ್ಲ. ಇದರಿಂದ ನೇಕಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಗೆ ಉತ್ಪನ್ನಗಳನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಬೇಕಾದ ಪರಿಸ್ಥಿತಿ ಇದೆ. ಜಿಲ್ಲೆಯ ರೇಷ್ಮೆ ಸೀರೆಗೆ ಪ್ರತ್ಯೇಕ ‘ಬ್ರ್ಯಾಂಡ್’ ಮೌಲ್ಯ ಕಲ್ಪಿಸಬೇಕು ಎಂಬ ಹಲವು ವರ್ಷಗಳ ಬೇಡಿಕೆಗೆ ಇದುವರೆಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.