ADVERTISEMENT

ಗ್ರಾಮ ಪಂಚಾಯಿತಿ ಚುನಾವಣೆ: ಗಮನ ಸೆಳೆಯುತ್ತಿದೆ ಗಂಗಮ್ಮನ ಪ್ರಚಾರ!

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 3:59 IST
Last Updated 20 ಡಿಸೆಂಬರ್ 2020, 3:59 IST
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟರ್
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟರ್   
""

ತುಮಕೂರು: ತಾಲ್ಲೂಕಿನ ಹೆಬ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕೆರೆ ಕ್ಷೇತ್ರದಿಂದ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ಎಚ್‌.ಗಂಗಮ್ಮ ಅವರ ಪ್ರಚಾರದ ಕರಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇವರ ಚುನಾವಣಾ ಕರಪತ್ರ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದೆ. ಸಚಿವ ಸುರೇಶ್ ಕುಮಾರ್, ‘ಇದೊಂದು ವಿನೂತನ ಚುನಾವಣಾ ಪ್ರಚಾರ ಪತ್ರ. ಇಂತಹದ್ದನ್ನು ಇಲ್ಲಿಯವರೆಗೂ ನೋಡಿರಲಿಲ್ಲ’ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಚಪ್ಪಲಿ ಗುರುತು ಗಂಗಮ್ಮ ಅವರಿಗೆ ದೊರೆತಿದೆ. ಗೆದ್ದರೆ ಮತ್ತು ಸೋತರೆ ಮಾಡುವ ಕೆಲಸಗಳ ಪಟ್ಟಿಯನ್ನು ಅವರು ಕರಪತ್ರದಲ್ಲಿ ಮುದ್ರಿಸಿದ್ದಾರೆ.

ಗೆದ್ದರೆ ಕರೇತಿಮ್ಮರಾಯಸ್ವಾಮಿ ದೇವಸ್ಥಾನದ ಇನಾಮ್ ಜಮೀನನ್ನು ಮೂಲ ಖಾತೆಯಂತೆ ದೇವರ ಹೆಸರಿಗೆ ಮಾಡುವೆ, ಅರಳೀಕಟ್ಟೆ ಕಟ್ಟಿಸುವೆ, ಚಿಕ್ಕಸಾಸಲಯ್ಯನ ಮನೆ ಹತ್ತಿರದಿಂದ ದೊಡ್ಡಕರೇಕಲ್‌ವರೆಗೆ ರಸ್ತೆ ಮಾಡಿಸುವೆ, ಊರ ಮುಂದೆ ಮಳೆ ನೀರು ರಸ್ತೆಗೆ ಹರಿಯದೆ ಸರಾಗವಾಗಿ ಹರಿಯಲು ಸಗ್ಗಯ್ಯನ ತಿಪ್ಪಾಳದಿಂದ ಹೊಂಬಯ್ಯನ ಗದ್ದೆವರೆಗೆ ಸಿಸಿ ಚರಂಡಿ ಮಾಡಿಸುವೆ ಎಂದು ತಿಳಿಸಿದ್ದಾರೆ.

ADVERTISEMENT

ಸೋತರೆ ಅನರ್ಹವಾಗಿ ಪಡೆದಿರುವ 25 ಕುಟುಂಬಗಳ ಪಡಿತರ ಚೀಟಿ ರದ್ದು ಮಾಡಿಸುವೆ, ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಪಡೆದಿರುವ 40 ಕುಟುಂಬಗಳ ಮಾಸಾಶನ ಹಣ ನಿಲ್ಲಿಸುವೆ, ಸರ್ವೆ ನಂ 86ರಲ್ಲಿ ಹಳೇ ದಾಖಲೆಯಂತೆ ಸ್ಮಶಾನ ಮಾಡಿಸುವೆ, ಕಲ್ಕೆರೆ ಗ್ರಾಮ ಠಾಣಾ ಜಾಗವನ್ನು ಯಾವುದೇ ಮೂಲ ದಾಖಲಾತಿ ಇಲ್ಲದೆ 11 ಕುಟುಂಬಗಳು ಒತ್ತುವರಿ ಮಾಡಿರುವ ಜಾಗವನ್ನು 1948ರ ಗ್ರಾಮದ ಹೌಸ್‌ಲೀಸ್ಟ್‌ನಂತೆ ತೆರವುಗೊಳಿಸಲು ಹೋರಾಟ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.