ADVERTISEMENT

ತುಮಕೂರು | ಗೌರಿ ಹಬ್ಬ: ಕನಕಾಂಬರ ಬಲು ಭಾರ

ಗೌರಿ ಹಬ್ಬ ಆಚರಣೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 6:01 IST
Last Updated 26 ಆಗಸ್ಟ್ 2025, 6:01 IST
ತುಮಕೂರಿನಲ್ಲಿ ಮಹಿಳೆಯರು ಗೌರಿ ಮೂರ್ತಿ ಖರೀದಿಸಿದರು
ತುಮಕೂರಿನಲ್ಲಿ ಮಹಿಳೆಯರು ಗೌರಿ ಮೂರ್ತಿ ಖರೀದಿಸಿದರು   

ತುಮಕೂರು: ಗೌರಿ ಹಬ್ಬದ ಸಂಭ್ರಮಾಚರಣೆಗೆ ಜಿಲ್ಲೆಯ ಜನ ಅಂತಿಮ ಸಿದ್ಧತೆ ಮಾಡಿಕೊಂಡಿದ್ದು, ನಗರದ ವಿವಿಧೆಡೆ ಸೋಮವಾರ ಗೌರಮ್ಮ ಮೂರ್ತಿಗಳನ್ನು ಖರೀದಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಹೂವು ಸೇರಿದಂತೆ ಹಬ್ಬಕ್ಕೆ ಬೇಕಾದ ಸಾಮಗ್ರಿ ಖರೀದಿಸಲು ಮುಂದಾದವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿತು.

ಬಿ.ಎಚ್‌.ರಸ್ತೆ, ಅಶೋಕ ರಸ್ತೆ, ಮಂಡಿಪೇಟೆ, ಚಿಕ್ಕಪೇಟೆ ಸೇರಿ ನಗರದ ಪ್ರಮುಖ ರಸ್ತೆ, ವೃತ್ತಗಳ ಬಳಿ ಗೌರಿ–ಗಣೇಶ ಮೂರ್ತಿ ಮಾರಾಟ ಮಾಡಲಾಗುತ್ತಿದೆ. ಭಾನುವಾರ ಸಂಜೆಯಿಂದ ಮೂರ್ತಿ ಖರೀದಿಸಲಾಗುತ್ತಿದೆ. ಎರಡು ದಿನ ಮುಂಚಿತವಾಗಿಯೇ ಹಬ್ಬದ ಸಂಭ್ರಮ ಕಳೆಗಟ್ಟಿದೆ.

ಮಹಿಳೆಯರು ಗೌರಿ ಮೂರ್ತಿ, ಮೊರ, ಬಳೆ, ಹಣ್ಣು, ಮಾವಿನ ಎಲೆ, ಬಾಳೆ ದಿಂಡು, ವಿವಿಧ ಬಗೆಯ ಹೂವು, ತಳಿರು–ತೋರಣ ಇತರೆ ಸಾಮಗ್ರಿ ಖರೀದಿಸಿದರು. ಮನೆ, ದೇಗುಲಗಳಲ್ಲಿ ಹಬ್ಬಕ್ಕೆ ತಯಾರಿ ನಡೆದಿದೆ. 

ADVERTISEMENT

ಕನಕಾಂಬರ ₹4 ಸಾವಿರ: ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಕೆ.ಜಿ 150ರಿಂದ ₹200 ಇದ್ದ ಗುಲಾಬಿ ಸೋಮವಾರ ₹300ರಿಂದ ₹400ಕ್ಕೆ ಏರಿಕೆಯಾಗಿತ್ತು. ಕೆ.ಜಿ ಮಲ್ಲಿಗೆ ₹1 ಸಾವಿರದಿಂದ ₹2 ಸಾವಿರ, ಕನಕಾಂಬರ ಕೆ.ಜಿ ₹4 ಸಾವಿರ ಮುಟ್ಟಿದೆ.

ಕೆ.ಜಿ ಸೇವಂತಿಗೆ ₹350, ಕಾಕಡ ₹700 ಇತ್ತು. ಮಾರುಕಟ್ಟೆಯ ಹೊರಗಡೆ ಚಿಲ್ಲರೆಯಾಗಿ ಇದಕ್ಕಿಂತ ಹೆಚ್ಚಿನ ಬೆಲೆಗೆ ಹೂವು ಮಾರಾಟ ಮಾಡಲಾಗುತ್ತಿದೆ. ಸಾರ್ವಜನಿಕರು ಹೂವಿನ ಬೆಲೆ ಕೇಳಿ ಮಾರುಕಟ್ಟೆಯಿಂದ ಬರಿಗೈನಲ್ಲಿ ವಾಪಸ್‌ ಆಗುತ್ತಿದ್ದ ದೃಶ್ಯ ಕಂಡುಬಂತು.

ಬಳೆ ಖರೀದಿಸಿದ ಮಹಿಳೆಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.