ಗುಬ್ಬಿ: ಸಂಸ್ಕಾರ ರೂಢಿಸಿಕೊಂಡು ಎಲ್ಲರೊಳಗೆ ಒಟ್ಟಾಗಿ ಬದುಕು ಕಟ್ಟಿಕೊಂಡಾಗ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.
ಚೇಳೂರು ಹೋಬಳಿ ಗೌರಿಪುರದಲ್ಲಿ ಗುರುವಾರ ಆಂಜನೇಯ ದೇವಾಲಯದ ನೂತನ ರಾಜಗೋಪುರ, ಕಳಶ ಪ್ರತಿಷ್ಠಾಪನೆ, ಮಹಾಕುಂಭಾಭಿಷೇಕದ ನಂತರ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೂರ್ವಜರು ಗ್ರಾಮಗಳಲ್ಲಿ ಒಗ್ಗಟ್ಟು ಮೂಡಿಸುವ ಕಾರಣದಿಂದಲೇ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಪೂರ್ವಜರ ಆಲೋಚನೆಗಳನ್ನು ಪರಿಪಾಲಿಸಿದಲ್ಲಿ ಗ್ರಾಮಗಳಲ್ಲಿ ಸಾಮರಸ್ಯದ ಬದುಕು ಕಾಣಲು ಸಾಧ್ಯ. ಗ್ರಾಮಸ್ಥರು ಕೆಲಸಗಳ ಒತ್ತಡಗಳ ನಡುವೆಯೂ ಧಾರ್ಮಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಪ್ರಭುದ್ಧತೆ ತೋರಿದ್ದಾರೆ ಎಂದು ಹೇಳಿದರು.
ಶಾಸಕ ಎಸ್.ಆರ್. ಶ್ರೀನಿವಾಸ್ ಮಾತನಾಡಿ, ‘ದೇವರು ಇದ್ದಾನೊ, ಇಲ್ಲವೊ ಗೊತ್ತಿಲ್ಲ. ಆದರೆ ದೇವರ ಹೆಸರಿನಲ್ಲಿ ಗ್ರಾಮಸ್ಥರು ಒಟ್ಟಾಗಿ ಇರುವುದು ಸಂತೋಷ ತಂದಿದೆ. ಇದೇ ಒಗ್ಗಟ್ಟನ್ನು ಮುಂದುವರೆಸಿಕೊಂಡು ಹೋದಲ್ಲಿ ಗ್ರಾಮಗಳಿಗೆ ಅಗತ್ಯ ಸೌಕರ್ಯಗಳನ್ನು ಪಡೆದುಕೊಳ್ಳಲು ಸಾಧ್ಯ. ಜನರು ದೇವರ ಬಗ್ಗೆ ಇರುವ ಭಕ್ತಿ ಹಾಗೂ ಗೌರವವನ್ನು ತಂದೆ ತಾಯಿ ಮೇಲೂ ತೋರಬೇಕಿದೆ. ಪೋಷಕರನ್ನು ನೋಯಿಸಿ ಎಷ್ಟೇ ದೇವರಿಗೆ ಪೂಜೆ ಸಲ್ಲಿಸಿದರೂ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.
ತೇವಡಿಹಳ್ಳಿ ಮಠದ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳ ಜೊತೆಯಲ್ಲಿಯೇ ಮಾನವೀಯತೆ ರೂಢಿಸಿಕೊಂಡು ಎಲ್ಲರನ್ನೂ ಸಮಾನ ದೃಷ್ಟಿಯಿಂದ ಕಾಣಬೇಕಿದೆ. ದೇವಾಲಯ ಲೋಕಾರ್ಪಣೆ ಹೆಸರಿನಲ್ಲಿ ಗ್ರಾಮಸ್ಥರೆಲ್ಲರೂ ಸಡಗರ, ಸಂಭ್ರಮದಿಂದ ಇರುವುದು ಪ್ರಶಂಸನೀಯ. ಉತ್ತಮ ಬದುಕುನ ಕಟ್ಟಿಕೊಂಡು ಜೀವನವನ್ನು ಸಾರ್ಥಕ ಪಡಿಸಿಕೊಳ್ಳಿ ಎಂದು ತಿಳಿಸಿದರು.
ಗ್ರಾಮಸ್ಥರು, ಮುಖಂಡರು, ಸ್ತುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.