ADVERTISEMENT

ಹಸಿರು ಶಾಲು ರೈತರ ಆತ್ಮಗೌರವದ ಸಂಕೇತ: ಪ್ರಾಧ್ಯಾಪಕ ಅಣ್ಣಪ್ಪ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 5:58 IST
Last Updated 14 ಫೆಬ್ರುವರಿ 2026, 5:58 IST
ತುಮಕೂರು ವಿ.ವಿ.ಯಲ್ಲಿ ಶುಕ್ರವಾರ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಕುರಿತು ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಹ ಪ್ರಾಧ್ಯಾಪಕ ಅಣ್ಣಪ್ಪ ಮಳಿಮಠ, ಕುಲಸಚಿವ (ಮೌಲ್ಯಮಾಪನ) ಪ್ರೊ.ಎಚ್.ಎಸ್.ಮೋಹನ್, ಶೇಷಾದ್ರಿಪುರಂ ಕಾಲೇಜು ಪ್ರಾಂಶುಪಾಲ ಜಿ.ಟಿ.ಜಗದೀಶ, ಅಧ್ಯಯನ ಪೀಠದ ನಿರ್ದೇಶಕ ಎಂ.ಮುನಿರಾಜು ಉಪಸ್ಥಿತರಿದ್ದರು
ತುಮಕೂರು ವಿ.ವಿ.ಯಲ್ಲಿ ಶುಕ್ರವಾರ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಕುರಿತು ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಹ ಪ್ರಾಧ್ಯಾಪಕ ಅಣ್ಣಪ್ಪ ಮಳಿಮಠ, ಕುಲಸಚಿವ (ಮೌಲ್ಯಮಾಪನ) ಪ್ರೊ.ಎಚ್.ಎಸ್.ಮೋಹನ್, ಶೇಷಾದ್ರಿಪುರಂ ಕಾಲೇಜು ಪ್ರಾಂಶುಪಾಲ ಜಿ.ಟಿ.ಜಗದೀಶ, ಅಧ್ಯಯನ ಪೀಠದ ನಿರ್ದೇಶಕ ಎಂ.ಮುನಿರಾಜು ಉಪಸ್ಥಿತರಿದ್ದರು   

ತುಮಕೂರು: ‘ಪ್ರತಿಯೊಬ್ಬ ರೈತನೂ ನಾಯಕನಾಗಬೇಕು ಎಂದು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಬಯಸಿದ್ದರು. ಹಸಿರು ಶಾಲನ್ನು ರೈತರ ಕಿರೀಟವಾಗಿ, ಆತ್ಮಗೌರವದ ಸಂಕೇತವಾಗಿ ಪರಿಗಣಿಸಿದ್ದರು’ ಎಂದು ಶಿವಮೊಗ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹ ಪ್ರಾಧ್ಯಾಪಕ ಅಣ್ಣಪ್ಪ ಮಳಿಮಠ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾಲಯ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅಧ್ಯಯನ ಪೀಠ, ಶೇಷಾದ್ರಿಪುರಂ ಕಾಲೇಜು ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಪ್ರೊ.ಎಂ.ಡಿ.ನಂಜುಂಡಸ್ವಾಮಿ ವಿಚಾರಧಾರೆ– ಭಾರತದ ರೈತ ಚಳವಳಿ’ ಕುರಿತು ಉಪನ್ಯಾಸ ನೀಡಿದರು.

ನಂಜುಂಡಸ್ವಾಮಿ ಏಕಾಂಗಿಯಾಗಿ ಹೋರಾಟ ಆರಂಭಿಸಿ, ಅದನ್ನು ಬೃಹತ್ ಚಳವಳಿಯನ್ನಾಗಿ ರೂಪಿಸಿ ರೈತ ಸಂಘ ಕಟ್ಟಿ, ಬೆಳೆಸಿದರು. ಜಾತ್ಯತೀತ ತಳಹದಿಯ ಮೇಲೆ ರೈತ ಚಳವಳಿ ಸಂಘಟಿಸಿದ್ದರು. ನರಗುಂದ- ನವಲಗುಂದ ರೈತರ ಹೋರಾಟ ದೇಶದ ಇತಿಹಾಸದಲ್ಲೇ ಮಹತ್ವದ ತಿರುವು ಪಡೆದುಕೊಂಡಿತು ಎಂದು ನೆನಪಿಸಿಕೊಂಡರು.

ADVERTISEMENT

ರೈತರು ತಾವು ಬೆಳೆದ ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಿ, ಸ್ವಾವಲಂಬಿ ಜೀವನ ನಡೆಸಬೇಕು ಎಂಬ ಆಶಯ ಹೊಂದಿದ್ದರು. ಕೀಟನಾಶಕ ಬಳಕೆಯನ್ನು ವಿರೋಧಿಸಿದ್ದರು. ಸರ್ಕಾರಗಳು ಈಗಲಾದರೂ ನೆಲ ಮೂಲದ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ ಎಂದು ಒತ್ತಾಯಿಸಿದರು.

ತುಮಕೂರು ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಸ್.ಮೋಹನ್, ‘ದೇಶದಲ್ಲಿ ದುಡಿಯುವ ವರ್ಗ ಅಧಿಕಾರಕ್ಕೆ ಬರಬೇಕು. ಅನ್ನ ನೀಡುವ ರೈತನಿಗೆ ಸಮಾಜದಲ್ಲಿ ಸೂಕ್ತ ಗೌರವ ಸಿಗಬೇಕು ಎಂಬ ಆಶಯವನ್ನು ನಂಜುಂಡಸ್ವಾಮಿ ಹೊಂದಿದ್ದರು’ ಎಂದರು.

ಶೇಷಾದ್ರಿಪುರಂ ಕಾಲೇಜು ಪ್ರಾಂಶುಪಾಲ ಪ್ರೊ.ಜಿ.ಟಿ.ಜಗದೀಶ, ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅಧ್ಯಯನ ಪೀಠದ ನಿರ್ದೇಶಕ ಎಂ.ಮುನಿರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.