ADVERTISEMENT

ಪೌಷ್ಟಿಕ ತೋಟ ಬೆಳೆಸಿ: ಎಸ್.ನಟರಾಜ್ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 3:03 IST
Last Updated 19 ಸೆಪ್ಟೆಂಬರ್ 2020, 3:03 IST
ತುಮಕೂರು ಸಮೀಪದ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು. ಎಸ್.ನಟರಾಜ್, ಶರದ್, ಡಾ.ಲೋಗಾನಂದನ್ ಇದ್ದಾರೆ
ತುಮಕೂರು ಸಮೀಪದ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು. ಎಸ್.ನಟರಾಜ್, ಶರದ್, ಡಾ.ಲೋಗಾನಂದನ್ ಇದ್ದಾರೆ   

ತುಮಕೂರು: ಅಪೌಷ್ಟಿಕತೆ ದೂರ ಮಾಡಲು ‘ಪೌಷ್ಟಿಕ ಕೈತೋಟ’ ಬೆಳೆಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್ ರೈತ ಮಹಿಳೆಯರಿಗೆ ಸಲಹೆ ಮಾಡಿದರು.

ರಾಷ್ಟ್ರೀಯ ಫೋಷಣ್ ಅಭಿಯಾನದ ಅಂಗವಾಗಿ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ), ಇಫ್ಕೊ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಈಚೆಗೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಂಗನವಾಡಿ ಮೇಲ್ವಿಚಾರಕಿಯರು, ಕಾರ್ಯಕರ್ತೆಯರು, ರೈತ ಮಹಿಳೆಯರಿಗೆ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಮತ್ತು ಗರ್ಭಿಣಿಯರಲ್ಲಿ ಪೌಷ್ಟಿಕತೆ ಹೆಚ್ಚಿಸಲು ಅಂಗನವಾಡಿ ಕಾರ್ಯಕತೆಯರು ಮನೆಗಳಿಗೆ ಭೇಟಿ ನೀಡಿ ಅರಿವು ಮೂಡಿಸುತ್ತಿದ್ದಾರೆ. ಕಾರ್ಯಕರ್ತೆಯರು ಮನೆಗೆ ಭೇಟಿ ನೀಡಿದಾಗ ಪೌಷ್ಟಿಕಯುಕ್ತ ಆಹಾರ ಸೇವಿಸಲು ನೀಡುವ ಸಲಹೆಗಳನ್ನು ಪಾಲಿಸಬೇಕೆಂದು ಎಂದರು.

‘ಕಾವೇರಿ ಕೂಗು’ ಅಭಿಯಾನದ ಸಂಚಾಲಕ ಶರದ್, ‘ರೈತ ಮಹಿಳೆಯರು ಮರ ಆಧಾರಿತ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಇದರಿಂದ ಅರಣ್ಯೀಕರಣ ಅಭಿವೃದ್ಧಿಯಾಗುತ್ತದೆ. ಜತೆಗೆ ಮಣ್ಣು ಸವಕಳಿಯಾಗುವುದನ್ನು ತಡೆಗಟ್ಟಬಹುದು’ ಎಂದು ತಿಳಿಸಿದರು.

ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಲೋಗಾನಂದನ್, ಕೆವಿಕೆ ವತಿಯಿಂದ ರೈತರಿಗೆ ಹಮ್ಮಿಕೊಂಡಿರುವ ತರಬೇತಿ ಹಾಗೂ ಮತ್ತಿತರ ಸೌಲಭ್ಯಗಳನ್ನು ಪಡೆಯುವ ಬಗ್ಗೆ ಮಾಹಿತಿ ನೀಡಿದರು.

ತೋಟಗಾರಿಕೆ ವಿಭಾಗದ ವಿಷಯ ತಜ್ಞ ಜೆ.ಎಂ.ಪ್ರಶಾಂತ್, ಪೌಷ್ಟಿಕ ಕೈತೋಟ ನಿರ್ಮಾಣ, ನಿರ್ವಹಣೆ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು. ವಿಷಯ ತಜ್ಞೆ (ಗೃಹ ವಿಜ್ಞಾನ) ರಾಧಾ ಆರ್.ಬಣಕಾರ, ಪೌಷ್ಟಿಕ ಕೈತೋಟದ ಮಹತ್ವ, ಆಹಾರ ಸಂರಕ್ಷಣೆ, ಲಘು ಪೋಷಕಾಂಶಗಳ ಭದ್ರತೆಗಾಗಿ ಜೈವಿಕವಾಗಿ ಅಭಿವೃದ್ಧಿಪಡಿಸಿರುವ ತಳಿಗಳ ಬಗ್ಗೆ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.