ಗುಬ್ಬಿ: ತಾಲ್ಲೂಕಿನಲ್ಲಿ ಅಡಿಕೆ ಕೊಯ್ಲುಮಾಡಿ ಬೇಯಿಸಿ ಒಣಗಿಸಲು ಗ್ರಾಮ ಹಾಗೂ ಜಮೀನಿನಲ್ಲಿ ಜಾಗವಿಲ್ಲದೆ ಡಾಂಬರು ರಸ್ತೆ ಹಾಗೂ ಹೆದ್ದಾರಿಗಳನ್ನು ರೈತರು ಬಳಸಿಕೊಳ್ಳುತ್ತಿದ್ದಾರೆ.
ಕಳೆದ ಎರಡು, ಮೂರು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ರೈತರು ಹಾಗೂ ಚೇಣಿದಾರರು ಅಡಿಕೆ ಒಣಗಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಹೆದ್ದಾರಿಗೆ ಸಮೀಪವಿರುವ ರೈತರು ಹೆದ್ದಾರಿಯಲ್ಲಿ, ವಾಹನಗಳ ಸಂಚಾರಕ್ಕೆ ಅನುವು ನೀಡದಿರುವ ಜಾಗಗಳಲ್ಲಿ ಹಾಗೂ ಖಾಲಿ ಇರುವ ಹೆದ್ದಾರಿ ಮೇಲು ಸೇತುವೆಗಳಲ್ಲಿ ಒಣಗಿಸುತ್ತಿದ್ದಾರೆ.
‘ಬೇಯಿಸಿದ ಅಡಿಕೆಯನ್ನು ವ್ಯವಸ್ಥಿತವಾಗಿ ಒಣಗಿಸಬೇಕು. ಸ್ವಲ್ಪ ಹೆಚ್ಚು ಕಮ್ಮಿ ಆದಲ್ಲಿ ಅಡಿಕೆ ಕೆಟ್ಟು ಹೋಗಿ ಯಾವುದೇ ಪ್ರಯೋಜನಕ್ಕೆ ಬರದಂತಾಗುತ್ತದೆ. ಅಡಿಕೆಯಿಂದಲೇ ಬದುಕು ಕಟ್ಟಿಕೊಂಡಿರುವ ನಾವು ಸಂಕಷ್ಟಕ್ಕೆ ಸಿಲುಕುವಂತಾಗಿದೆ’ ಎಂದು ರೈತ ಗುರುಮೂರ್ತಿ ಬೇಸರ ವ್ಯಕ್ತಪಡಿಸಿದರು.
‘ಲಕ್ಷಾಂತರ ಬಂಡವಾಳ ಹಾಕಿ ಅಡಿಕೆ ಚೇಣಿ ಮಾಡಿದ್ದೇವೆ. ಸ್ವಲ್ಪ ಹೊತ್ತು ಸಮಯ ಸಿಕ್ಕರೂ ಗಾಳಿಗಾದರೂ ಆರಿಕೊಳ್ಳುತ್ತದೆ ಎಂಬ ಕಾರಣಕ್ಕೆ ಹೆದ್ದಾರಿಗೆ ತಂದು ಹಾಕುತ್ತಿದ್ದೇವೆ. ಒಂದು ಬೆಳೆ ಹಾಳಾದರೆ ಲಕ್ಷಾಂತರ ರೂ ನಷ್ಟವಾಗುತ್ತದೆ’ ಎಂದು ಚೇಣಿದಾರ ಸಿದ್ದಲಿಂಗಪ್ಪ ಹೇಳಿದರು.
‘ತಾಲ್ಲೂಕಿನಲ್ಲಿ ರೈತರು ಅಧಿಕವಾಗಿ ಅಡಿಕೆ ಬೆಳೆಯುತ್ತಿದ್ದಾರೆ. ಅಡಿಕೆ ಒಣಗಿಸಲು ಆಧುನಿಕ ತಂತ್ರಜ್ಞಾನನು ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸಬೇಕಿದೆ’ ಎನ್ನುತ್ತಾರೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಗುರುಪ್ರಸಾದ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.