ಗುಬ್ಬಿ: ಗುಬ್ಬಿ ಕ್ಷೇತ್ರದ ಶಾಸಕರೇ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷರಾಗಿದ್ದರೂ ವ್ಯವಸ್ಥಿತವಾಗಿ ಬಸ್ ವ್ಯವಸ್ಥೆ ಇಲ್ಲ ಎಂದು ನಿಟ್ಟೂರು ಹೋಬಳಿ ಕೊಂಡ್ಲಿ ಕ್ರಾಸ್ ಸುತ್ತಮುತ್ತಲಿನ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕಿನ ಗಡಿ ಭಾಗದ ರಾಷ್ಟ್ರೀಯ ಹೆದ್ದಾರಿ 73ರಲ್ಲಿರುವ ಕೊಂಡ್ಲಿಕ್ರಾಸ್ ಸಮೀಪದ ತಾಲ್ಲೂಕುಗಳಾದ ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ ಸಂಪರ್ಕಿಸುವ ಕೊಂಡಿಯಂತಿದೆ. ಇಲ್ಲಿ ಸಮರ್ಪಕವಾಗಿ ಬಸ್ ನಿಲುಗಡೆ ಆಗದೆ ಇರುವುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತೆ ಆಗಿದೆ ಎಂದು ಶಾಲಾ ಕಾಲೇಜು ವಿದ್ಯಾರ್ಥಿಗಳು, ನೌಕರರು, ಸಾರ್ವಜನಿಕರು ದೂರಿದರು.
ತುಮಕೂರು ಡಿಪೊ ಬಸ್‌ಗಳನ್ನು ಹೊರತುಪಡಿಸಿದರೆ ಬೇರೆ ಯಾವುದೇ ಡಿಪೊ ಬಸ್‌ಗಳು ನಿಲುಗಡೆ ಆಗದೆ ಇರುವುದರಿಂದ ಬೆಳಗಿನ ಸಮಯದಲ್ಲಿ ವಿದ್ಯಾರ್ಥಿಗಳು ಹಾಗೂ ನೌಕರರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಸಮಯಕ್ಕೆ ತರಗತಿಗೆ ಹಾಜರಾಗಲು ಸಾಧ್ಯವಾಗದೆ ಪರದಾಡುವಂತಾಗಿದೆ ಎಂದು ಸಾರ್ವಜನಿಕರು ದೂರಿದರು.
ಯಾವ ಡಿಪೊ ಬಸ್‌ಗಳು ನಿಲುಗಡೆ ಆಗುವುದಿಲ್ಲ ಎನ್ನುವ ಕುರಿತು ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರು.
ಮುಖಂಡರಾದ ಯೋಗೀಶ್, ಸತೀಶ್, ಶಿವಮೂರ್ತಿ, ಲೋಹಿತ್,ಕಾವ್ಯ, ರಚಿತ ಹಾಗೂ ಅಪಾರ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.