
ಗುಬ್ಬಿ: ಕಲ್ಪತರು ನಾಡಿನ ಭಾಗವಾಗಿದ್ದ ಗುಬ್ಬಿ ತಾಲ್ಲೂಕು ನೀರಾವರಿ ಅನುಕೂಲಗಳು ಹೆಚ್ಚಾದಂತೆ ಅಡಿಕೆಯ ಬೀಡಾಗುತ್ತಿದೆ. ಅಡಿಕೆಗೆ ಮಣ್ಣು ಮತ್ತು ಗೊಬ್ಬರದ ಅಗತ್ಯ ಹೆಚ್ಚಿರುವುದರಿಂದ ಕೆಂಪು ಮಣ್ಣಿಗೆ ಬೇಡಿಕೆ ಹೆಚ್ಚಾಗಿದೆ.
ಕೆಂಪು ಮಣ್ಣಿನಲ್ಲಿ ಕಬ್ಬಿಣದ ಅಂಶ ಮತ್ತು ಆಮ್ಲಿಯಾ ಗುಣಗಳು ಹೆಚ್ಚಾಗಿರುವ ಜೊತೆಗೆ ಹೆಚ್ಚುದಿನ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ತೋಟಗಾರಿಕೆ ಬೆಳೆಗಳಿಗೆ ಹೆಚ್ಚಾಗಿ ಕೆಂಪು ಮಣ್ಣನ್ನು ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವ ಕಾರಣ ತಾಲ್ಲೂಕಿನಲ್ಲಿ ಅಡಿಗೆ ಬೆಳೆಗಾರರ ಸಂಖ್ಯೆ ಹೆಚ್ಚಿದೆ. ಅದಕ್ಕೆ ಅನುಗುಣವಾಗಿ ಕೆಂಪು ಮಣ್ಣಿಗೂ ಬೇಡಿಕೆ ಬಂದಿದೆ.
ಬಹುತೇಕ ರೈತರು ಅವರ ಜಮೀನುಗಳನ್ನು ಖಾಲಿ ಬಿಟ್ಟುಕೊಳ್ಳದೆ ಅಡಿಕೆ, ತೆಂಗಿನ ತೋಟಗಳನ್ನಾಗಿ ಮಾರ್ಪಡಿಸಿಕೊಂಡಿರುವುದರಿಂದ ಕೆಂಪು ಮಣ್ಣಿಗಾಗಿ ಹುಡುಕಾಡುವಂತಾಗಿದೆ. ಹಲವರು ಮಧ್ಯವರ್ತಿಗಳ ಮೊರೆ ಹೋಗುತ್ತಿದ್ದಾರೆ.
ದಲ್ಲಾಳಿಗಳು ಕೆಂಪು ಮಣ್ಣು ಇರುವ ಜಮೀನನ್ನು ಏಕರೆ ಗಟ್ಟಲೆ ರೈತರಿಂದ ಕಡಿಮೆ ಹಣಕ್ಕೆ ಖರೀದಿಸುತ್ತಾರೆ. ನಂತರ ಜೆಸಿಬಿಗಳನ್ನು ಬಳಸಿ ಮಣ್ಣು ಬಗೆದು ಲಾರಿಗಳ ಮೂಲಕ ತಂದು ರೈತರ ತೋಟಗಳಿಗೆ ಸುರಿಯುತ್ತಿದ್ದಾರೆ. ಪ್ರತಿ ಲೋಡ್‌ಗೆ ಕನಿಷ್ಠ ₹6 ಸಾವಿರದಿಂದ ₹8 ಸಾವಿರದವರೆಗೆ ಮಾರಾಟ ಮಾಡುತ್ತಿದ್ದಾರೆ.
ಮಧ್ಯವರ್ತಿಗಳು ಜೆಸಿಬಿಗಳ ಮೂಲಕ ಆಳವಾಗಿ ಗುಂಡಿ ತೆಗೆದಲ್ಲಿ ಅಕ್ಕಪಕ್ಕದ ಜಮೀನುಗಳಲ್ಲಿ ನೀರಿನ ಬಸಿ ಉಂಟಾಗಿ ತೊಂದರೆಯಾಗುತ್ತಿದೆ ಎಂದು ಕೆಲ ರೈತರು ದೂರಿದ್ದಾರೆ.
ಹಲವು ರೈತರು ಸ್ಥಳೀಯವಾಗಿ ಕೆಂಪುಮಣ್ಣು ದೊರೆಯದಿದ್ದಾಗ ಬೇರೆ ತಾಲ್ಲೂಕುಗಳಿಂದ ಲಾರಿಗಳಲ್ಲಿ ಕೆಂಪು ಮಣ್ಣನ್ನು ತರಿಸಿಕೊಂಡು ತೋಟಕ್ಕೆ ಸುರಿಸುತ್ತಿದ್ದಾರೆ. ಚಳಿಗಾಲ ಮುಗಿದು ಬೇಸಿಗೆ ಪ್ರಾರಂಭವಾಗುತ್ತಿರುವ ಈ ಸಂದರ್ಭದಲ್ಲಿ ರೈತರು ತೋಟಗಳಿಗೆ ಮಣ್ಣು ಸುರಿಸಲು ಮುಂದಾಗಿದ್ದಾರೆ.
ಕೆಲವೇ ವರ್ಷಗಳ ಹಿಂದೆ ಕೇಳುವವರೇ ಇಲ್ಲದಂತಿದ್ದ ಕೆಂಪುಮಣ್ಣಿಗೆ ತಾಲ್ಲೂಕಿನಲ್ಲಿ ಅಡಿಕೆ ಬೆಳೆ ಪ್ರದೇಶ ವಿಸ್ತರಣೆಯಾದಂತೆ ಬೇಡಿಕೆಯೂ ಕುದುರಿದೆ.
ಈ ಹಿಂದೆ ಬೀಳು ಜಮೀನುಗಳಲ್ಲಿ ಹಾಗೂ ಕೆರೆಗಳಲ್ಲಿ ಸಿಗುವ ಮಣ್ಣನ್ನೇ ತೋಟಗಳಿಗೆ ಹಾಕುತ್ತಿದ್ದೆವು. ಈಗ ಇಳುವರಿ ಹೆಚ್ಚಿಸಿಕೊಳ್ಳಲು ದುಬಾರಿ ಬೆಲೆಯಾದರೂ ಕೆಂಪು ಮಣ್ಣನ್ನು ಸುರಿಸುತ್ತಿದ್ದೇವೆ.- ಜಯದೇವಯ್ಯ, ರೈತ
ಪ್ರತಿ ವರ್ಷ ಅಡಿಕೆ ತೋಟಕ್ಕೆ ಕೆಂಪು ಮಣ್ಣು ಮತ್ತು ಗೊಬ್ಬರವನ್ನು ಹಾಕಬೇಕಿದೆ. ಇಲ್ಲವಾದಲ್ಲಿ ಇಳುವರಿ ಕಡಿಮೆಯಾಗುವುದು. ದೂರದ ಊರುಗಳಿಂದಲೂ ಒಂದು ಲಾರಿ ಲೋಡ್‌ಗೆ ₹6 ರಿಂದ ₹8 ಸಾವಿರದವರೆಗೆ ನೀಡಿ ಕೆಂಪುಮಣ್ಣು ಸುರಿಸುತ್ತಿದ್ದೇವೆ.- ಶಶಿಧರ್ ಪಟೇಲ್, ರೈತ
ಅಡಿಕೆ ತೆಂಗಿನ ತೋಟಕ್ಕೆ ಲೋಡ್‌ಗಟ್ಟಲೆ ಮಣ್ಣನ್ನು ಸುರಿಸುತ್ತಿರುವುದರಿಂದ ಸ್ಥಳೀಯವಾಗಿಯೇ ನಮಗೆ ಕೆಲಸ ದೊರಕುತ್ತಿದೆ. ಕೆಲವೊಮ್ಮೆ ಗುಡ್ಡೆ ಲೆಕ್ಕದಲ್ಲಿ ಮಣ್ಣನ್ನು ಚೆಲ್ಲುತ್ತೇವೆ. ಕೆಲವು ಬಾರಿ ದಿನ ಕೂಲಿ ಲೆಕ್ಕದಲ್ಲಿ ಮಣ್ಣನ್ನು ಚೆಲ್ಲುತ್ತೇವೆ.- ನಾಗರಾಜು, ಕಾರ್ಮಿಕ
ಕೆಂಪುಮಣ್ಣಿಗೆ ಬೇಡಿಕೆ ಇರುವುದರಿಂದ ರೈತರು ಕಡಿಮೆ ಹಣಕ್ಕೆ ಕೆಂಪುಮಣ್ಣನ್ನು ಮಧ್ಯವರ್ತಿಗಳಿಗೆ ಮಾರಿಕೊಳ್ಳಬಾರದು. ಕೆಂಪು ಮಣ್ಣನ್ನು ಕಾಪಾಡಿಕೊಂಡಲ್ಲಿ ಮುಂದಿನ ದಿನಗಳಲ್ಲಿ ಉಪಯೋಗಕ್ಕೆ ಬರುವುದು.- ಲೋಕೇಶ್, ರೈತಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.