ಗುಬ್ಬಿ: ಗುಬ್ಬಿ-ಸಿಎಸ್ ಪುರ ಮಧ್ಯೆ ಕಸಬಾ ಹೋಬಳಿ ಜಿ ಹೊಸಹಳ್ಳಿ ಸಮೀಪ ಟೋಲ್ ಸಂಗ್ರಹ ಕೇಂದ್ರ ಸ್ಥಾಪನೆಗೆ ಮುಂದಾಗಿರುವುದನ್ನು ಖಂಡಿಸಿ ಸೋಮವಾರ ರೈತ ಸಂಘ ಹಾಗೂ ವಿವಿಧ ಸಂಘಟನೆಯಿಂದ ಜಿ ಹೊಸಹಳ್ಳಿ ಸಮೀಪ ಪ್ರತಿಭಟನೆ ನಡೆಸಲಾಯಿತು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ರಾಜ್ಯ ಹೆದ್ದಾರಿ ಎಂದು ಸಬೂಬು ಹೇಳುವ ಅಧಿಕಾರಿಗಳು ಕಾಮಗಾರಿ ಸಂಪೂರ್ಣಗೊಳಿಸಲು ಆಸಕ್ತಿ ತೋರದೆ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದಾರೆ. ಈ ಭಾಗದಲ್ಲಿ ಯಾವುದೇ ಭಾರಿ ವಾಹನ ಸಂಚರಿಸುತ್ತಿಲ್ಲ. ಆದರೂ ಅಧಿಕಾರಿಗಳು ಸ್ಥಳೀಯರ ಹಾಗೂ ರೈತರ ಶೋಷಣೆಗೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಟೋಲ್ ಸಂಗ್ರಹ ಕೇಂದ್ರವನ್ನು ಅವೈಜ್ಞಾನಿಕವಾಗಿ ನಿರ್ಮಿಸಲು ಮುಂದಾಗಿರುವ ಅಧಿಕಾರಿಗಳು ತಕ್ಷಣ ಕಾಮಗಾರಿ ನಿಲ್ಲಿಸಿ ಸ್ಥಳದಲ್ಲಿರುವ ಸರಕುಗಳನ್ನು ಸಾಗಿಸದಿದ್ದಲ್ಲಿ ರೈತ ಸಂಘದಿಂದ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, ಹೆದ್ದಾರಿ ಲೋಕಾರ್ಪಣೆಗೊಂಡು ಹಲವು ವರ್ಷಗಳೇ ಕಳೆದಿವೆ. ಹಲವೆಡೆ ರಸ್ತೆ ಕಿರಿದಾಗಿದ್ದು ಅಗತ್ಯ ಕ್ರಮಕೈಗೊಳ್ಳದೆ ಅಧಿಕಾರಿಗಳು ಪ್ರಸ್ತುತ ಟೋಲ್ ಕೇಂದ್ರ ಸ್ಥಾಪಿಸಲು ಮುಂದಾಗುತ್ತಿರುವ ಕಾರಣವಾದರೂ ಏನು ಎಂದು ತಿಳಿಯುತ್ತಿಲ್ಲ ಎಂದರು.
ಕೆಶಿಪ್‌ನವರ ಈ ಕ್ರಮದಿಂದ ಸ್ಥಳೀಯರಿಗೆ ಸಾಕಷ್ಟು ತೊಂದರೆ ಉಂಟಾಗುವುದೇ ಹೊರತು ಯಾವುದೇ ಅನುಕೂಲ ಆಗುವುದಿಲ್ಲ. ಅಧಿಕಾರಿಗಳು ಹಾಗೂ ತಾಲ್ಲೂಕು ಆಡಳಿತ ಸಾರ್ವಜನಿಕರ ಹಿತ ಕಡೆಗಣಿಸುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ತಾಲ್ಲೂಕು ಆಡಳಿತ ತಕ್ಷಣ ಕಾಮಗಾರಿ ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂದೆ ಆಗುವ ಎಲ್ಲಾ ಅನಾಹುತಕ್ಕೂ ಅಧಿಕಾರಿಗಳೇ ಕಾರಣರಾಗುತ್ತಾರೆ ಎಂದು ತಿಳಿಸಿದರು.
ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ಅವೈಜ್ಞಾನಿಕವಾಗಿ ನಿರ್ಮಾಣವಾಗುತ್ತಿರುವ ಟೋಲ್ ಸಂಗ್ರಹ ಕೇಂದ್ರವನ್ನು ನಿಲ್ಲಿಸಬೇಕು ಎಂದು ಹಲವಾರು ದಿನಗಳಿಂದ ಸಾರ್ವಜನಿಕರು ಹಾಗೂ ಸ್ಥಳೀಯ ರೈತರು ಒತ್ತಾಯಿಸುತ್ತಿದ್ದಾರೆ. ಅಧಿಕಾರಿಗಳು ಸ್ಥಳೀಯರಿಗೆ ಸ್ಪಂದಿಸದಿರುವುದು ವಿಪರ್ಯಾಸ ಎಂದರು.
ತಾಲ್ಲೂಕು ಆಡಳಿತವು ಸ್ಥಳೀಯ ಸಾರ್ವಜನಿಕರ ನೋವನ್ನು ಅರ್ಥೈಸಿಕೊಂಡು ಮೇಲಧಿಕಾರಿಗಳ ಹಾಗೂ ಸರ್ಕಾರದ ಗಮನಕ್ಕೆ ತಂದು ಕಾಮಗಾರಿ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಆರತಿ ಬಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ಹೊನ್ನಗಿರಿಗೌಡ, ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಸಿ ಶಂಕರಪ್ಪ, ತಾಲ್ಲೂಕು ಘಟಕದ ಕಾರ್ಯದರ್ಶಿ ಲೋಕೇಶ್, ಯುವ ಘಟಕದ ಅಧ್ಯಕ್ಷ ಶಿವಕುಮಾರ್, ಶಬೀರ್, ರಂಗಹನುಮಯ್ಯ, ರೆಹಮಾತ್ ಹುಲ್ಲಾ, ಅಜ್ಜಪ್ಪ, ಮಂಜುನಾಥ್, ಮೋಹನ್, ಕುಮಾರ್, ಶಿವಕುಮಾರ್, ಕೃಷ್ಣಜೆಟ್ಟಿ, ಮಂಜುನಾಥ್, ಬಸವರಾಜು, ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.