ADVERTISEMENT

ಗುಬ್ಬಿ | ಹಾಗಲವಾಡಿಯಲ್ಲೀಗ ಕುರಿ, ಮೇಕೆ ವಹಿವಾಟು: ಸೌಕರ್ಯ ಒದಗಿಸುವತ್ತ ಚಿತ್ತ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 6:16 IST
Last Updated 19 ಜನವರಿ 2026, 6:16 IST
ಗುಬ್ಬಿ ತಾಲ್ಲೂಕಿನ ಹಾಗಲವಾಡಿಯಲ್ಲಿ ಕುರಿ, ಮೇಕೆ ವ್ಯಾಪಾರ
ಗುಬ್ಬಿ ತಾಲ್ಲೂಕಿನ ಹಾಗಲವಾಡಿಯಲ್ಲಿ ಕುರಿ, ಮೇಕೆ ವ್ಯಾಪಾರ   

ಗುಬ್ಬಿ: ತಾಲ್ಲೂಕಿನ ಹಾಗಲವಾಡಿ ಹೋಬಳಿ ಕೇಂದ್ರದಲ್ಲಿ ತರಕಾರಿ, ತೆಂಗಿನಕಾಯಿ ವ್ಯಾಪಾರಕ್ಕೆ ಸೀಮಿತವಾಗಿದ್ದ ಶುಕ್ರವಾರದ ಸಂತೆಯಲ್ಲೀಗ ಕುರಿ, ಮೇಕೆ ವಹಿವಾಟು ಆರಂಭವಾಗಿದೆ.

ತೀರಾ ಹಿಂದುಳಿದ ಪ್ರದೇಶವಾಗಿರುವ ಇಲ್ಲಿನ ರೈತರು ಕುರಿ, ಮೇಕೆ, ಎಮ್ಮೆಗಳನ್ನು ಸಾಕಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಅವುಗಳ ಮಾರಾಟಕ್ಕೆ ಚಿಕ್ಕನಾಯಕನಹಳ್ಳಿ, ಶಿರಾ, ಗುಬ್ಬಿ, ಕಲ್ಲೂರು ಸಂತೆಗಳಿಗೆ ಹೋಗಬೇಕಿತ್ತು.

ಸ್ಥಳೀಯ ಮುಖಂಡ ಜಗದೀಶ್ ಬಾಬು ಹಾಗಲವಾಡಿಯಲ್ಲಿಯೇ ಕುರಿ, ಮೇಕೆ, ದನಗಳ ವ್ಯಾಪಾರ ಆರಂಭಕ್ಕೆ ಇಂಗಿತ ವ್ಯಕ್ತಪಡಿಸಿದ್ದರು. ಸ್ಥಳೀಯರು ಇದಕ್ಕೆ ಸಹಕಾರ ನೀಡಿದರು. ಗ್ರಾಮದ ಕರಿಯಮ್ಮ ದೇವಾಲಯದ ನೂತನ ಆಡಳಿತ ಮಂಡಳಿಯವರು ಸಂತೆ ಪ್ರಾರಂಭಕ್ಕೆ ಆಸಕ್ತಿ ತೋರಿದ್ದರಿಂದ  ದೇವಾಲಯಕ್ಕೆ ಸೇರಿದ ಜಾಗದಲ್ಲಿ ಪ್ರತಿ ಶುಕ್ರವಾರ ಕುರಿ, ಮೇಕೆ, ದನಗಳ ಸಂತೆಗೆ ಇತ್ತೀಚೆಗೆ ಚಾಲನೆ ನೀಡಲಾಗಿದೆ.

ADVERTISEMENT

ಸಂತೆ ಪ್ರಾರಂಭಗೊಂಡ ಕೆಲವೇ ದಿನಗಳಲ್ಲಿ ಭರ್ಜರಿ ವಹಿವಾಟು ನಡೆಯುತ್ತಿದೆ. ಇದುವರೆಗೂ ಕುರಿ, ಮೇಕೆಗಳನ್ನು ವ್ಯವಸ್ಥಿತವಾಗಿ ಮಾರಲು ಸಾಧ್ಯವಾಗದೆ ದಲ್ಲಾಳಿಗಳು ಕೇಳಿದ ದರದಲ್ಲಿಯೇ ರೈತರು ಮಾರಬೇಕಿತ್ತು. ಆದರೆ ಈಗ ಸಂತೆ ಪ್ರಾರಂಭಗೊಂಡಿರುವುದರಿಂದ ಸೂಕ್ತ ಬೆಲೆಗೆ ವ್ಯಾಪಾರ ನಡೆಸಲು ಅನುಕೂಲವಾಗಿದೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರತಿ ಶುಕ್ರವಾರ ಬೆಳಗ್ಗೆ ಕುರಿ, ಮೇಕೆಗಳ ವ್ಯಾಪಾರ ನಡೆಯುತ್ತಿರುವುದರಿಂದ ತರಕಾರಿ ಹಾಗೂ ಕಾಯಿ ವ್ಯಾಪಾರಕ್ಕೆ ಯಾವುದೇ ತೊಂದರೆಯಾಗುತ್ತಿಲ್ಲ. ಕುರಿ, ಮೇಕೆಗಳಿಗೆ ಅನುಕೂಲವಾಗುವಂತೆ ಸದ್ಯಕ್ಕೆ ಲಭ್ಯ ಇರುವ ನೀರಿನ ಮೂಲಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸಂತೆ ಆರಂಭಗೊಂಡ ಕೆಲವೇ ದಿನಗಳಲ್ಲಿ ಲಕ್ಷಗಟ್ಟಲೆ ವಹಿವಾಟು ಪ್ರಾರಂಭವಾಗಿರುವುದು ಸ್ಥಳೀಯ ವ್ಯಾಪಾರಿಗಳು ಹಾಗೂ ರೈತರನ್ನು ಉತ್ತೇಜಿಸಿದೆ.

ತಾಲ್ಲೂಕು ಕೇಂದ್ರದಿಂದ 40 ಕಿ.ಮೀ. ದೂರದಲ್ಲಿರುವ ಹಾಗಲವಾಡಿ ನೀರಾವರಿ ಸೌಕರ್ಯಗಳಿಂದ ವಂಚಿತವಾಗಿದೆ. ಹಾಗಲವಾಡಿ ಕೆರೆಗೆ ಹೇಮಾವತಿ ನಾಲೆ ನೀರು ಹರಿಸುವ ಪ್ರಯತ್ನ ನಡೆಯುತ್ತಿದೆಯಾದರೂ ಇದುವರೆಗೂ ಸಾಕಾರಗೊಂಡಿಲ್ಲ. ತೀರಾ ಹಿಂದುಳಿದ ಪ್ರದೇಶವಾಗಿರುವ ಇಲ್ಲೀಗ ಜನರು ಕುರಿ, ಮೇಕೆ ಸಾಕಣೆಯತ್ತ ಹೆಚ್ಚು ಒಲವು ತೋರುತ್ತಿದ್ದಾರೆ.

ಕರಿಯಮ್ಮದೇವರ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಕುರಿ, ಮೇಕೆ ಸಂತೆ ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಅಲ್ಪ ಸುಂಕ ಪಡೆದು ಸಂತೆ ವ್ಯಾಪಾರಕ್ಕೆ ಅಗತ್ಯವಿರುವ ಸೌಕರ್ಯಗಳನ್ನು ಒದಗಿಸಲು ಮುಂದಾಗುತ್ತೇವೆ. ಇದರಿಂದ ರೈತರಿಗೂ ಅನುಕೂಲವಾಗುವ ಜೊತೆಗೆ ದೇವಾಲಯಕ್ಕೂ ಆದಾಯದ ಮೂಲವಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

ಗುಬ್ಬಿ ತಾಲ್ಲೂಕಿನ ಹಾಗಲವಾಡಿಯಲ್ಲಿ ಕುರಿ ಮೇಕೆ ವ್ಯಾಪಾರ
ಸ್ಥಳೀಯವಾಗಿ ಸಂತೆ ಆರಂಭವಾಗಿರುವುದರಿಂದ ಸ್ಥಳೀಯ ಸಂಪನ್ಮೂಲ ಸ್ಥಳೀಯರಲ್ಲಿಯೇ ಹಂಚಿಕೆಯಾಗುವ ಜೊತೆಗೆ ಉತ್ತಮ ವಹಿವಾಟು ನಡೆಯಲು ಸಾಧ್ಯ.
ಚಿರಂಜೀವಿ ಕರವೇ ಹೋಬಳಿ ಘಟಕದ ಅಧ್ಯಕ್ಷ
ಹಾಗಲವಾಡಿ ಸುತ್ತಮುತ್ತ ನೀರಾವರಿ ಸೌಕರ್ಯ ಕಡಿಮೆ. ಕುರಿ ಮೇಕೆ ಎಮ್ಮೆಗಳನ್ನು ಕಟ್ಟಿಕೊಂಡು ಬದುಕು ಸಾಗಿಸುತಿದ್ದೇವೆ. ಸ್ಥಳೀಯವಾಗಿ ಸಂತೆ ಪ್ರಾರಂಭಿಸಿರುವುದು ಅನುಕೂಲವಾಗಿದೆ. ಮೊದಲಿಗಿಂತ ಹೆಚ್ಚಿನ ಆದಾಯ ಸಿಗುತ್ತಿದೆ.
ಬೋರಜ್ಜ ಸ್ಥಳೀಯ
ಮುಂದಿನ ದಿನಗಳಲ್ಲಿ ಅಲ್ಪ ಸುಂಕ ವಸೂಲಿ
ಪೂರ್ವಜರ ಕಾಲದಲ್ಲಿ ಕುರಿ ಮೇಕೆ ವ್ಯಾಪಾರ ನಮ್ಮ ಗ್ರಾಮದಲ್ಲಿಯೇ ನಡೆಯುತ್ತಿತ್ತು ಎಂದು ಕೇಳಿದ್ದೆ. ಇತ್ತೀಚೆಗೆ ಸ್ಥಳೀಯರು ಕುರಿ ಮೇಕೆ ವ್ಯಾಪಾರಕ್ಕಾಗಿ ಪರದಾಡುತ್ತಿರುವುದನ್ನು ಕಂಡು ಇರುವ ಸೌಲಭ್ಯಗಳನ್ನು ಬಳಸಿಕೊಂಡು ಸಂತೆ ಪ್ರಾರಂಭಿಸಿದ್ದೇವೆ. ಸದ್ಯಕ್ಕೆ ರೈತರಿಂದ ಯಾವುದೇ ಸುಂಕ ವಸೂಲಿ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಮುಂದಾಗುತ್ತೇವೆ. ವ್ಯಾಪಾರ ವಹಿವಾಟು ಹೆಚ್ಚಾದಲ್ಲಿ ಸ್ಥಳೀಯ ರೈತರಿಗೆ ಅನುಕೂಲವಾಗುವುದು– ಜಗದೀಶ್ ಬಾಬು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.