ADVERTISEMENT

ತುಮಕೂರು: ಗೌರವಧನಕ್ಕಾಗಿ ಅಂಗವಿಕಲರ ಪ್ರತಿಭಟನೆ

ವರ್ಷದಿಂದ ಸಿಗದ ಹಣ : ಜೀವನ ನಿರ್ವಹಣೆಯ ಸಂಕಷ್ಟದಲ್ಲಿ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 9:19 IST
Last Updated 4 ಫೆಬ್ರುವರಿ 2020, 9:19 IST
ಅಂಗವಿಕಲರ ಒಕ್ಕೂಟದ ಅಹವಾಲುಗಳನ್ನು ಜಿಲ್ಲಾಧಿಕಾರಿ ರಾಕೇಶ್‌ಕುಮಾರ್‌ ಅವರು ಆಲಿಸಿದರು.
ಅಂಗವಿಕಲರ ಒಕ್ಕೂಟದ ಅಹವಾಲುಗಳನ್ನು ಜಿಲ್ಲಾಧಿಕಾರಿ ರಾಕೇಶ್‌ಕುಮಾರ್‌ ಅವರು ಆಲಿಸಿದರು.   

ತುಮಕೂರು: ವರ್ಷದಿಂದ ಬಾಕಿ ಇರುವನಗರ ಪುನರ್ವಸತಿ ಕಾರ್ಯಕರ್ತರ(ಯು.ಆರ್‌.ಡಬ್ಲ್ಯೂ.) ಗೌರವಧನವನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು ಎಂಬ ಒತ್ತಾಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ತುಮಕೂರು ನಗರ ಅಂಗವಿಕಲರ ಒಕ್ಕೂಟದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ಮಾಡಿದರು.

ಅಂಗವಿಕಲರ ಕಲ್ಯಾಣ ಯೋಜನೆಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ. ಸೇವಾ–ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸಲು ಸರ್ಕಾರಿ ಆಡಳಿತ ವರ್ಗ ವಿಫಲವಾಗಿದೆ ಎಂದು ಆರೋಪಿಸಿದರು.

ಒಕ್ಕೂಟದ ಸಂಚಾಲಕಿ ಟಿ.ಎಸ್‌.ಮಂಜುಳಾ ಮಾತನಾಡಿ, ಯು.ಆರ್‌.ಡಬ್ಲ್ಯೂ.ಗಳಲ್ಲಿ ಬಹುತೇಕರು ಅಂಗವಿಕಲರೇ ಇದ್ದಾರೆ. ಅವರಿಗೆ ಸಕಾಲಕ್ಕೆ ಗೌರವಧನ ಸಿಗುತ್ತಿಲ್ಲ. ಇದರಿಂದ ಅವರ ಜೀವನ ನಿರ್ವಹಣೆ ಕಷ್ಟವಾಗಿದೆ. ಇದನ್ನು ಅಧಿಕಾರಿಗಳು ಗಮನಿಸಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಅಂಗವಿಕಲರ ಕಲ್ಯಾಣದ ಕ್ರಿಯಾ ಯೋಜನೆಗಳು ಜೀವನ ಕಟ್ಟಿಕೊಳ್ಳುವಂತೆ ಹಾಗೂ ಮಾನವ ಸಂಪನ್ಮೂಲ ರೂಪಿಸುವಂತೆ ಇರಬೇಕು. ಪ್ರತಿ ಮೂರು ತಿಂಗಳಿಗೆ ಒಮ್ಮೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಅಂಗವಿಕಲರ ಕುಂದು–ಕೊರತೆ ಸಭೆ ನಡೆಸಬೇಕು. ಕೆಲಸ ಮಾಡುವ ಸಾಮಾರ್ಥ್ಯ ಇರುವ ಅಂಗವಿಕಲರಿಗೆ ಉದ್ಯೋಗ ಕಲ್ಪಿಸಬೇಕು. ಇಲ್ಲದವರಿಗೆ ಆರ್ಥಿಕ ಸಹಾಯ ನೀಡಬೇಕು. ಈಗ ಮುಚ್ಚಿರುವ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರವನ್ನು ಮತ್ತೆ ತೆರೆಯಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕೆ.ರಾಕೇಶ್‌ಕುಮಾರ್‌ ಮತ್ತು ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ರಮೇಶ್‌ ಅವರು ಪ್ರತಿಭಟನೆ ನಿರತರನ್ನು ಭೇಟಿಯಾಗಿ ಅಹವಾಲು ಸ್ವೀಕರಿಸಿದರು.

‘ಅಂಗವಿಕಲರ ಕಲ್ಯಾಣಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಫೆ.14ರಂದು ಸಭೆ ನಡೆಸುತ್ತೇನೆ. ಆ ಸಭೆಗೆ ಒಕ್ಕೂಟದ ಪ್ರತಿನಿಧಿಗಳನ್ನು ಕರೆಯುತ್ತೇನೆ. ಆ ಮೂಲಕ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ’ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.