ADVERTISEMENT

ತುಮಕೂರು: ಹನುಮನ ಭಕ್ತರ ಸಂಭ್ರಮ ಜೋರು

ಹನುಮದ್‌ ವ್ರತದ ಪ್ರಯುಕ್ತ ವಿಶೇಷ ಪೂಜೆ; ವಿವಿಧೆಡೆ ಉತ್ಸವ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2024, 15:39 IST
Last Updated 13 ಡಿಸೆಂಬರ್ 2024, 15:39 IST
ತುಮಕೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮ ವ್ರತದ ಪ್ರಯುಕ್ತ ಶುಕ್ರವಾರ ಉತ್ಸವ ನೆರವೇರಿತು
ತುಮಕೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮ ವ್ರತದ ಪ್ರಯುಕ್ತ ಶುಕ್ರವಾರ ಉತ್ಸವ ನೆರವೇರಿತು   

ತುಮಕೂರು: ಹನುಮ ವ್ರತದ ಪ್ರಯುಕ್ತ ಭಕ್ತರು ಶುಕ್ರವಾರ ಹನುಮನ ಜಪ ಮಾಡಿದರು. ವಿವಿಧ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

ಹನುಮನ ಭಕ್ತರು ದೇವಾಲಯದ ಮುಂದೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ‘ಜೈ ಹನುಮಾನ್’, ‘ಜೈ ಶ್ರೀರಾಮ್‌’ ಘೋಷಣೆಗಳು ಮೊಳಗಿದವು. ಶ್ರದ್ಧಾಭಕ್ತಿಯಿಂದ ಹನುಮನ ಸ್ಮರಣೆ ಮಾಡಿದರು. ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಕೇಸರಿ ಧ್ವಜಗಳು ರಾರಾಜಿಸಿದವು. ತಳಿರು–ತೋರಣ, ಬಾಳೆದಿಂಡುಗಳಿಂದ ದೇಗುಲ ಅಲಂಕರಿಸಲಾಗಿತ್ತು.

ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ವತಿಯಿಂದ ಉತ್ಸವ ನೆರವೇರಿತು. ತರಹೇವಾರಿ ಹೂವುಗಳಿಂದ ಸಿಂಗರಿಸಿದ್ದ ಮಂಟಪದಲ್ಲಿ ಆಂಜನೇಯ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಮಕ್ಕಳು, ಮಹಿಳೆಯರು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನ ಭಾಗವಹಿಸಿ ಉತ್ಸವದ ಸಂಭ್ರಮ ಹೆಚ್ಚಿಸಿದರು.

ADVERTISEMENT

ಅತ್ಯಂತ ಪುರಾತನವಾದ ಕೋಟೆ ಆಂಜನೇಯ ಸ್ವಾಮಿ ದೇಗುಲದಲ್ಲಿ ಎರಡು ದೇವರ ಮೂರ್ತಿಗಳಿವೆ. ಇದರಲ್ಲಿ ಒಂದು ಹಳೆಯ ಕಾಲ ಮೂರ್ತಿಯಾಗಿದೆ. ನಗರದ ವಿವಿಧ ಭಾಗದ ಜನರು ಬೆಳಿಗ್ಗೆಯೇ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದರು.

ಕ್ಯಾತ್ಸಂದ್ರದ ಚಂದ್ರಮೌಳೀಶ್ವರ ದೇಗುಲದಲ್ಲಿ ಶಿವ ದೀಪೋತ್ಸವ ಜರುಗಿತು. ಬೆಳಗ್ಗೆ ಅಭಿಷೇಕ, ಸಂಜೆ ಉತ್ಸವ ನಡೆಯಿತು. ಗಾರ್ಡನ್ ರಸ್ತೆಯ ಅಗ್ನಿಬನ್ನಿರಾಯ ನಗರದಲ್ಲಿ ಶ್ರೀರಾಮ ಸೇವಾ ಸಮಿತಿಯಿಂದ ದೇವರ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ನಂತರ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಕೆ.ಪಾಲಸಂದ್ರದ ಶ್ರೀರಾಮ ಭಜನಾ ಮಂಡಳಿಯಿಂದ ಭಕ್ತಿಗೀತೆಗಳ ಗಾಯನ ಏರ್ಪಡಿಸಲಾಗಿತ್ತು.

ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ದೇವಾಲಯ, ಅಭಯ ಆಂಜನೇಯ ಸ್ವಾಮಿ ದೇಗುಲ, ಪ್ರಾದೇಶಿಕ ಸಾರಿಗೆ ಕಚೇರಿ ಬಳಿಯ ವರ ಪ್ರಸಾದ ವೀರಾಂಜನೇಯ ಸ್ವಾಮಿ ದೇವಸ್ಥಾನ, ಶ್ರೀರಾಮನಗರದ ಕಿಕ್ಕೇರಿ ಆಂಜನೇಯಸ್ವಾಮಿ ದೇವಾಲಯ ಸೇರಿ ವಿವಿಧ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು.

ತುಮಕೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಹನುಮ ವ್ರತದ ಅಂಗವಾಗಿ ಸಾರ್ವಜನಿಕರು ದೇವರ ದರ್ಶನ ಪಡೆದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.