ಕೊರಟಗೆರೆ: ರಾಜ್ಯದಲ್ಲಿ ದೇವೇಗೌಡರು ನೀಡಿದ ಮಹಿಳಾ ಮೀಸಲಾತಿಯಿಂದಾಗಿ ಇಂದು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರು ಹಾಗೂ ಎಲ್ಲ ವರ್ಗದವರಿಗೂ ಸಾಮಾಜಿಕ ನ್ಯಾಯ ಸಿಕ್ಕಂತಾಗಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ನಡೆದ ಜೆಡಿಎಸ್ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಡು, ನುಡಿ, ಜಲ, ಅಸ್ಮಿತೆ ಉಳಿಯ ಬೇಕಾದರೆ ಪ್ರಾದೇಶಿಕ ಪಕ್ಷಗಳು ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು. ರಾಜ್ಯದ ಭದ್ರತೆಗೆ ಜೆಡಿಎಸ್ ಅನಿವಾರ್ಯ. ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ಗಮನ ನೀಡುವುದಿಲ್ಲ. ರಾಜ್ಯದಲ್ಲಿ ಜೆಡಿಎಸ್‌ಗೆ ಬಲಿಷ್ಠ ಕಾರ್ಯಕರ್ತರ ಪಡೆ ಇದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಶಕ್ತಿಯುತಗೊಳಿಸಲಾಗುವುದು. ಪಕ್ಷದ ಕಾರ್ಯಕರ್ತರು ಎಲ್ಲಾ ಬೂತ್‌ಗಳಲ್ಲೂ ಸದಸ್ಯತ್ವ ನೋಂದಣಿ ಮಾಡಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧರಾಗಿ ಎಂದರು.
ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಮಾತನಾಡಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರೈತರು, ಬಡವರು, ಮಹಿಳೆಯರಿಗೆ ನೀಡಿದ ಕಾರ್ಯಕ್ರಮಗಳನ್ನು ಯಾವ ಮುಖ್ಯಮಂತ್ರಿಗಳು ಮಾಡಿಲ್ಲ. ಕೇಂದ್ರ ಸಚಿವರಾದ ಮೇಲೆ ಆಂದ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯಲ್ಲಿ ಸರ್ಕಾರದ ಸ್ಟೀಲ್ ಕಾರ್ಖಾನೆ ಉಳಿಸಿ 11 ಸಾವಿರ ಕಾರ್ಮಿಕರಿಗೆ ಕೆಲಸ ನೀಡಿ ಮತ್ತೆ ಜೀವನ ಕಟ್ಟಿಕೊಟ್ಟಿದ್ದಾರೆ ಎಂದು ಬಣ್ಣಿಸಿದರು.
ಪಟ್ಟಣದ ಮುಖ್ಯ ರಸ್ತೆಯಲ್ಲಿ ಪಕ್ಷದ ಯುವ ಕಾರ್ಯಕರ್ತರಿಂದ ಬೈಕ್ ರ‍್ಯಾಲಿ ನಡೆಯಿತು. ವಿಧಾನ ಪರಿಷತ್ ಸದಸ್ಯ ತಿಪ್ಪೆಸ್ವಾಮಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ ಅಂಜಿನಪ್ಪ, ತಾಲ್ಲೂಕು ಅಧ್ಯಕ್ಷ ಕಾಮರಾಜು, ಯುವ ಅಧ್ಯಕ್ಷ ವೆಂಕಟೇಶ್, ತುಮಲ್ ನಿರ್ದೇಶಕ ಸಿದ್ದಗಂಗಪ್ಪ, ಪ.ಪಂ.ಸದಸ್ಯ ಲಕ್ಷ್ಮಿನಾರಾಯಣ್ ಹಾಗೂ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.
ಅಸಹಾಯಕತೆ ಪ್ರದರ್ಶನ:
ಜಿಲ್ಲೆಯಲ್ಲಿ ಜೆಡಿಎಸ್ ಬಲಿಷ್ಠವಾಗಿದೆ. ಕೊರಟಗೆರೆ ಕ್ಷೇತ್ರದ ಶಾಸಕರು ರಾಜ್ಯ ಸರ್ಕಾರದ ಅತ್ಯುನ್ನತ ಸ್ಥಾನದಲ್ಲಿದ್ದಾರೆ. ಆದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದಲ್ಲಿ ಬಲಿಯಾದ ಅಮಾಯಕರ ಬಗ್ಗೆ ಅವರು ತೋರಿದ ಅಸಹಾಯಕತೆ ಅಸಮರ್ಥತೆಯನ್ನು ರಾಜ್ಯದ ಜನ ಗಮನಿಸಿದ್ದಾರೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ಸುಧಾಕರ ಲಾಲ್ ಗೆಲುವು ಖಚಿತ ಎಂದು ನಿಖಿಲ್ ಕುಮಾರಸ್ವಾಮಿ ಭವಿಷ್ಯ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.