ADVERTISEMENT

ಶಾಸಕ ಗೌರಿಶಂಕರ್ ವಿರುದ್ಶ ಸುಳ್ಳು ಆಡಿಯೋ ಸೃಷ್ಟಿ

ಮಾಜಿ ಶಾಸಕ ಬಿ.ಸುರೇಶ್‌ಗೌಡ ವಿರುದ್ಧ ಕಾನೂನು ಹೋರಾಟ, ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಹಾಲನೂರು ಅನಂತ್‌ಕುಮಾರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2019, 16:06 IST
Last Updated 24 ಆಗಸ್ಟ್ 2019, 16:06 IST
ಹಾಲನೂರು ಅನಂತಕುಮಾರ್
ಹಾಲನೂರು ಅನಂತಕುಮಾರ್   

ತುಮಕೂರು: ಗೂಳೂರು ಮತ್ತು ಹೆಬ್ಬೂರು ಏತ ನೀರಾವರಿ ಯೋಜನೆಯ ಕೆರೆಗಳಿಗೆ ನೀರು ಬಿಡಬಾರದು ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರು ಹೇಳಿ ಅಡ್ಡಿಪಡಿಸಿದ್ದಾರೆ ಎಂದು ಮಾಜಿ ಶಾಸಕ ಬಿ.ಸುರೇಶ್‌ಗೌಡ ಮಾಡಿರುವ ಆರೋಪದಲ್ಲಿ ಸತ್ಯಾಂಶವಿಲ್ಲ’ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರ ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತ್‌ಕುಮಾರ್ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸುಳ್ಳು ಆಡಿಯೋ ಸೃಷ್ಟಿಸಿ ಶಾಸಕರ ತೇಜೋವಧೆಗೆ ಯತ್ನಿಸಿದ್ದು, ಅವರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

‘ಮಾಜಿ ಶಾಸಕರು ಸೃಷ್ಟಿಸಿರುವ ಆಡಿಯೋದಲ್ಲಿ ಎಲ್ಲಿಯೂ ಶಾಸಕರ ಹೆಸರಾಗಲಿ, ಅವರ ಆಪ್ತ ಸಹಾಯಕರ ಹೆಸರು ಇಲ್ಲ. ಮಾಜಿ ಶಾಸಕರೇ ಹಾಲಿ ಶಾಸಕರ ಹೆಸರು ಹೇಳಿ ಆರೋಪ ಮಾಡಿದ್ದಾರೆ. ಬುಗುಡನಹಳ್ಳಿ ಕೆರೆ ತುಂಬಿದ ಬಳಿಕ ಮೊದಲು ತುಮಕೂರು ಗ್ರಾಮಾಂತರ ಕ್ಷೇತ್ರದ ಕೆರೆಗಳಿಗೆ ನೀರು ಹರಿಸುವ ಬಗ್ಗೆ ಜಿಲ್ಲಾಧಿಕಾರಿ, ಹೇಮಾವತಿ ನಾಲಾ ಎಂಜಿನಿಯರ್‌ಗಳು ಶಾಸಕ ಗೌರಿಶಂಕರ್ ಅವರಿಗೆ ತಿಳಿಸಿದ್ದರು. ನೀರು ಬಿಟ್ಟ ತಕ್ಷಣ ನಾಗವಲ್ಲಿ ಕೆರೆಗೆ ಪೂಜೆ ಸಲ್ಲಿಸಲು ಉದ್ದೇಶಿಸಲಾಗಿತ್ತು. ಆದರೆ, ಇದ್ದಕ್ಕಿದ್ದಂತೆಯೇ ಜಿಲ್ಲಾಧಿಕಾರಿಗಳು ಕುಣಿಗಲ್ ಕೆರೆಗೆ ನೀರು ಹರಿಸುವ ನಿರ್ಧಾರ ಕೈಗೊಂಡಿದ್ದರಿಂದ ಗ್ರಾಮಾಂತರ ಕ್ಷೇತ್ರದ ಕೆರೆಗಳಿಗೆ ನೀರು ಹರಿದಿಲ್ಲ ಎಂದು ವಿವರಿಸಿದರು.

ADVERTISEMENT

’ಈ ವಾಸ್ತವಾಂಶದ ಅರಿವಿಲ್ಲದ ಮಾಜಿ ಶಾಸಕ ಸುರೇಶ್‌ಗೌಡ ಶಾಸಕರ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಹೇಳಿದರು.
ಈ ತಿಂಗಳ 30ರವರೆಗೆ ಕುಣಿಗಲ್‌ಗೆ ಹೇಮಾವತಿ ನೀರು ಹರಿಸಲಾಗುವುದು. ನಂತರ 15 ದಿನ ತುಮಕೂರು ಗ್ರಾಮಾಂತರ ಕ್ಷೇತ್ರದ ಕೆರೆಗಳಿಗೆ ವೇಳಾಪಟ್ಟಿ ಪ್ರಕಾರ ನೀರು ಹರಿಸುವುದಾಗಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರೇ ಹೇಳಿದ್ದಾರೆ. ಅವರನ್ನೇ ಸುರೇಶ್‌ಗೌಡ ಕೇಳಿದ್ದರೂ ಮಾಹಿತಿ ಸಿಗುತ್ತಿತ್ತು. ಅದನ್ನು ಮಾಡದೇ ಆರೋಪ ಮಾಡಿದ್ದಾರೆ’ ಎಂದು ದೂರಿದರು.

ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲ ಕೆರೆಗಳಿಗೂ ನೀರು ತುಂಬಿಸುತ್ತೇವೆ ಎಂದು ಸಂಸದ ಜಿ.ಎಸ್.ಬಸವರಾಜು ಹಾಗೂ ಸಚಿವ ಜೆ.ಸಿ.ಮಾಧುಸ್ವಾಮಿ ಜಿಲ್ಲೆಯ ಜನರಿಗೆ ಭರವಸೆ ನೀಡಿದ್ದರು. ಈಗ ಅವರು ಅಧಿಕಾರಕ್ಕೆ ಬಂದಿದ್ದಾರೆ. ಹೇಮಾವತಿ ನೀರಾವರಿ ಹಾಗೂ ಅಚ್ಚುಕಟ್ಟು ಪ್ರದೇಶದ ಎಲ್ಲ ಕೆರೆಗಳಿಗೂ ನೀರು ತುಂಬಿಸಿ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು. ಅವರು ಕೆರೆಗಳನ್ನು ತುಂಬಿಸಿದರೆ ಜೆಡಿಎಸ್ ಪಕ್ಷದಿಂದಲೇ ಬೃಹತ್ ಸನ್ಮಾನವನ್ನು ಮಾಡುವುದಾಗಿ ಅನಂತ್‌ಕುಮಾರ್ ಘೋಷಿಸಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜಿನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಹಿರೇಹಳ್ಳಿ ಮಹೇಶ್, ರಾಮೇಗೌಡ, ಚಂದ್ರು ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.