ADVERTISEMENT

ಹುತ್ರಿದುರ್ಗ ಹೋಬಳಿ: ಐದು ಕೆರೆಗೆ ಹರಿದ ಹೇಮಾವತಿ ನೀರು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 7:08 IST
Last Updated 23 ಡಿಸೆಂಬರ್ 2025, 7:08 IST
ಕುಣಿಗಲ್ ತಾಲ್ಲೂಕು ಶ್ರೀರಂಗ ಏತನೀರಾವರಿ ಯೋಜನೆ ಮೂಲಕ ಹುತ್ರಿದುರ್ಗ ಹೋಬಳಿ ಕೆರೆಗಳಿಗೆ ನೀರು ಹರಿಸಲು ಶಾಸಕ ಡಾ.ರಂಗನಾಥ್ ಚಾಲನೆ ನೀಡಿದರು
ಕುಣಿಗಲ್ ತಾಲ್ಲೂಕು ಶ್ರೀರಂಗ ಏತನೀರಾವರಿ ಯೋಜನೆ ಮೂಲಕ ಹುತ್ರಿದುರ್ಗ ಹೋಬಳಿ ಕೆರೆಗಳಿಗೆ ನೀರು ಹರಿಸಲು ಶಾಸಕ ಡಾ.ರಂಗನಾಥ್ ಚಾಲನೆ ನೀಡಿದರು   

ಕುಣಿಗಲ್: ಶ್ರೀರಂಗ ಏತ ನೀರಾವರಿ ಯೋಜನೆಗೆ ಸೋಮವಾರ ಪ್ರಾಯೋಗಿಕವಾಗಿ ಶಾಸಕ ಡಾ.ರಂಗನಾಥ್ ಚಾಲನೆ ನೀಡಿದರು. ಹುತ್ರಿದುರ್ಗ ಹೋಬಳಿಯ ಐದು ಕೆರೆಗಳಿಗೆ ನೀರು ಹರಿದು ಈ ಭಾಗದ ರೈತರು ಸಂತಸ ವ್ಯಕ್ತಪಡಿಸಿದರು.

₹378 ಕೋಟಿ ವೆಚ್ಚದ ಯೋಜನೆಗೆ 2015ರಲ್ಲಿ ಚಾಲನೆ ನೀಡಲಾಗಿತ್ತು. ಯೋಜನೆ ಪ್ರಾರಂಭವಾದ ದಿನದಿಂದಲೂ ಅಡೆತಡೆಗಳೆ ಹೆಚ್ಚಾಗಿತ್ತು. ಮೊದಲಿಗೆ ಮಳೆಯಿಂದಾಗಿ ಯಲಿಯೂರು ಕೆರೆಯಲ್ಲಿ ಸಂಗ್ರಹಿಸಲಾಗಿದ್ದ ಪೈಪ್, ಯಂತ್ರಗಳು ನೀರಿನಲ್ಲಿ ಮುಳುಗಿ ನಾಶವಾಗಿತ್ತು.

ನಂತರ ಪೈಪ್‌ಲೈನ ಕಾಮಗಾರಿಗೆ ಭೂಸ್ವಾಧಿನ ಪ್ರಕ್ರಿಯೆಗಳು ಅಡ್ಡಿಯಾಗಿತ್ತು. ಪಂಪ್‌ಹೌಸ್ ವಿದ್ಯುತ್ ವ್ಯವಸ್ಥೆ ಸಮಸ್ಯೆಗಳು ಎದುರಾಗಿತ್ತು. ಶ್ರೀರಂಗ ಏತ ನೀರಾವರಿ ಯೋಜನೆಯ ಪ್ರಕಾರ ಹುತ್ರಿದುರ್ಗ ಹೋಬಳಿಯ 17 ಕೆರೆ ಸೇರಿದಂತೆ ಮಾಗಡಿ ತಾಲ್ಲೂಕಿನ 83 ಕೆರೆಗಳಿಗೆ ನೀರು ಹರಿಸುವ ಬಗ್ಗೆ ತಾಲ್ಲೂಕುಗಳ ಜನಪ್ರತಿನಿಧಿಗಳಿಂದ ಮತ್ತು ಸಂಘಸಂಸ್ಥೆಗಳಿಂದ ಪ್ರತಿಭಟನೆ ನಿರಂತರವಾಗಿ ನಡೆಯುತ್ತಿದ್ದರೂ, ಎಲ್ಲ ಅಡೆತಡೆಗಳ ನಡುವೆ ಯೋಜನೆ ಪ್ರಥಮ ಹಂತದಲ್ಲಿ ಯಶಸ್ವಿಯಾಗಿದೆ.

ADVERTISEMENT

ಶಾಸಕ ಡಾ.ರಂಗನಾಥ್, ಮಾಜಿ ಸಂಸದ ಡಿ.ಕೆ.ಸುರೇಶ್ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಶಯದಂತೆ ಶುಕ್ರವಾರ ಮಾಗಡಿ ತಾಲ್ಲೂಕಿಗೆ ಪ್ರಾಯೋಗಿಕವಾಗಿ ಮತ್ತು ಸೋಮವಾರ ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಮಳೆ ಆಶ್ರಯದಲ್ಲಿದ್ದರೂ ಹತ್ತಾರು ವರ್ಷದಿಂದ ತುಂಬದಿದ್ದ ಹುತ್ರಿ, ಯಲಿಯೂರು, ಎ ಹೊಸಹಳ್ಳಿ, ಹೊಸೂರ್ ಕತ್ತರಿಘಟ್ಟ ಐದು ಕೆರೆಗಳಿಗೆ ತಾಲ್ಲೂಕಿನ ಕಲ್ಲನಾಯಕನಹಳ್ಳಿ ಬಳಿಯ (ಈರೆಕೆರೆ)ಪಂಪ್‌ಹೌಸ್‌ನಿಂದ ನೀರನ್ನು ಬಿಡಲಾಗಿದೆ.

ಶಾಸಕ ಡಾ.ರಂಗನಾಥ್ ಮಾತನಾಡಿ, ಹುತ್ರಿದುರ್ಗ ಹೋಬಳಿಯಲ್ಲಿ 25 ಕೆರೆಗಳಿದೆ. ಯಾವುದೇ ನೀರಿನ ಮೂಲಗಳಿಲ್ಲದ ಕಾರಣ ಮಳೆ ಆಶ್ರಯದಲ್ಲೆ ತುಂಬಬೇಕಾಗಿದ್ದ ಕೆರೆಗಳು ಹತ್ತಾರು ವರ್ಷದಿಂದ ತುಂಬದೆ ನೀರಿಗೆ ಸಮಸ್ಯೆಯಾಗಿತ್ತು. ಶ್ರೀರಂಗ ಏತ ನೀರಾವರಿ ಯೋಜನೆ ಮೂಲಕ 19 ಕೆರೆಗಳನ್ನು ತುಂಬಿಸುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಕೆರೆಗಳಿಗೂ ನೀರು ಹರಿಸಲಾಗುವುದು ಎಂದರು.

ಕೊತ್ತಗೆರೆ ಹೋಬಳಿಗೂ ಏತ ನೀರಾವರಿ ಯೋಜನೆಗೆ ಮಂಜೂರಾತಿ ದೊರೆತಿದ್ದು ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ಹುಲಿಯೂರುದುರ್ಗ ಹೋಬಳಿಯ ಕೆರೆಗಳಿಗೂ ನೀರು ತುಂಬಿಸುವ ಪ್ರಯತ್ನ ಮಾಡಲಾಗುವುದು. ಲಿಂಕ್ ಕೆನಾಲ್ ಮೂಲಕ ತಾಲ್ಲೂಕಿನ ಎಲ್ಲ ಕೆರೆಗಳಿಗೂ ನೀರು ತುಂಬಿಸುವ ಕಾರ್ಯ ಮಾಡುವುದಾಗಿ ತಿಳಿಸಿದರು.

ಕೋಘಟ್ಟ ರಾಜಣ್ಣ, ಬೇಗೂರು ನಾರಾಯಣ, ಯಲಚವಾಡಿ ನಾಗರಾಜು, ಗಂಗಶಾನಯ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಹಾಲವಾಗಿಲು ಸ್ವಾಮಿ, ಬೋರೆಗೌಡ, ಹೇಮಾವತಿ ನಾಲಾವಲಯದ ಎಂಜಿನಿಯರ್ ಕಿರಣ್ ಕುಮಾರ್, ರವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.