ADVERTISEMENT

ಶಿರಾ: ‘ರಾಜಕೀಯಕ್ಕೆ ಹೇಮೆ ಬಳಕೆ’

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 7:53 IST
Last Updated 13 ಸೆಪ್ಟೆಂಬರ್ 2020, 7:53 IST

ಶಿರಾ: ತಾಲ್ಲೂಕಿಗೆ ಹೇಮಾವತಿ ನೀರು ಹರಿಸುವ ವಿಚಾರದಲ್ಲಿ ಅಡ್ಡಿಪಡಿಸಿದ ಜಿಲ್ಲೆಯ ಬಿಜೆಪಿ ಮುಖಂಡರು ಇಂದು ರಾಜಕೀಯ ಲಾಭಕ್ಕಾಗಿ ಮದಲೂರು ಕೆರೆಗೆ ನೀರು ಹರಿಸಲು ಮುಂದಾಗಿರುವುದು ನಾಚಿಕೆಗೇಡು ಎಂದು ಜೆಡಿಎಸ್‌ಮುಖಂಡ ಸಿ.ಆರ್.ಉಮೇಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ವರ್ಷವಾದರೂ ಮದಲೂರು ಕೆರೆಗೆ ನೀರು ಹರಿಸುವ ಬಗ್ಗೆ ಕಾಳಜಿ ತೋರಿರಲಿಲ್ಲ. ಈಗ ಉಪಚುನಾವಣೆ ಹೊಸ್ತಿಲಿನಲ್ಲಿ ರಾಜಕೀಯ ಲಾಭಕ್ಕಾಗಿ ನೀರು ಹರಿಸಲು ಮುಂದಾಗಿದ್ದಾರೆ’ ಎಂದರು.

2002ರಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಸೊಗಡು ಶಿವಣ್ಣ ಅವರು ತಾಲ್ಲೂಕಿಗೆ ಹೇಮೆ ಹರಿಸಲು ವಿರೋಧ ವ್ಯಕ್ತಪಡಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. 2010ರಲ್ಲಿ ಮದಲೂರು ಕೆರೆ ಯೋಜನೆ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು ಎಂದು ಹೇಳಿದರು.

ADVERTISEMENT

ಬಿಜೆಪಿ ಹಣದ ಹೊಳೆ ಹರಿಸಿ ಚುನಾವಣೆಯಲ್ಲಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಆದರೆ ಜನರ ಪ್ರೀತಿ, ಅಭಿಮಾನ ಕುಮಾರಸ್ವಾಮಿ ಮೇಲಿದೆ ಎಂದರು.

ಜೆಡಿಎಸ್‌ನಲ್ಲಿ ಯಾರಿಗೆ ಟಿಕೆಟ್‌ ನೀಡಿದರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಸ್ಥಳೀಯ ಅಭ್ಯರ್ಥಿ ಯಾರೇ ಇದ್ದರೂ ನಮಗೆ ಎಚ್.ಡಿ. ಕುಮಾರಸ್ವಾಮಿಯೇ ಅಭ್ಯರ್ಥಿ ಎಂದು ಕೆಲಸ ಮಾಡುತ್ತೇವೆ ಎಂದರು.

ಶಾಸಕರಾಗಿದ್ದ ಬಿ.ಸತ್ಯನಾರಾಯಣ ಅವರಿಗೆ ಗಾಯಿತ್ರಿ ಜಲಾಶಯದಿಂದ ಶಿರಾಕ್ಕೆ ನೀರು ತರುವ ಕನಸಿತ್ತು. ಈಗ ಭದ್ರಾ ಜಲಾಶಯದ ನೀರು ಬರುವುದರಿಂದ ಶಿರಾಕ್ಕೆ ಪೈ‍ಪ್‌ಲೈನ್ ಮೂಲಕ ನೀರು ತಂದು ಯೋಜನೆಗೆ ಬಿ.ಸತ್ಯನಾರಾಯಣ ಅವರ ಹೆಸರು ಇಡಬೇಕು ಎಂದರು.

ನಿವೃತ್ತ ಪ್ರಾಧ್ಯಾಪಕ ಕಟಾವೀರನಹಳ್ಳಿ ನಾಗರಾಜು, ಗೋಮಾರದಹಳ್ಳಿ ಮಂಜುನಾಥ್, ಮಾರುತಿ, ನಾಗರಾಜು ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.