ADVERTISEMENT

ತುಮಕೂರು: ಮಹಾತ್ಮಗಾಂಧಿ ಕ್ರೀಡಾಂಗಣಕ್ಕೆ ಹೈಟೆಕ್ ಸ್ಪರ್ಶ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 6:22 IST
Last Updated 24 ಜೂನ್ 2021, 6:22 IST
ಮಹಾತ್ಮಗಾಂಧಿ ಕ್ರೀಡಾಂಗಣವನ್ನು ಶಾಸಕ ಜ್ಯೋತಿಗಣೇಶ್ ಪರಿಶೀಲಿಸಿದರು
ಮಹಾತ್ಮಗಾಂಧಿ ಕ್ರೀಡಾಂಗಣವನ್ನು ಶಾಸಕ ಜ್ಯೋತಿಗಣೇಶ್ ಪರಿಶೀಲಿಸಿದರು   

ತುಮಕೂರು: ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಪಕ್ಕ ಪಶ್ಚಿಮ ಭಾಗದಲ್ಲಿ ಎರಡು ಲಾಂಗ್‍ಜಂಪ್ ಪಿಟ್‍ಗಳು ನಿರ್ಮಾಣವಾಗುತ್ತಿದ್ದು, ಇದರ ಜತೆಗೆ ಪೂರ್ವ ಭಾಗದಲ್ಲೂ ಎರಡು ಲಾಂಗ್‍ಜಂಪ್ ಪಿಟ್‍ ನಿರ್ಮಿಸಿಕೊಡುವಂತೆ ವಿವಿಧ ಕ್ರೀಡಾ ಸಂಘಟನೆಗಳ ಪ್ರಮುಖರು ಮನವಿ ಮಾಡಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಬುಧವಾರ ಕ್ರೀಡಾಂಗಣಕ್ಕೆ ಭೇಟಿನೀಡಿ ಕಾಮಗಾರಿ ಪರಿಶೀಲಿಸಿದ ಸಮಯದಲ್ಲಿ ಅಲ್ಲಿ ಅಗಬೇಕಿರುವ ಕೆಲಸಗಳ ಬಗ್ಗೆ ಗಮನ ಸೆಳೆದರು.

ಕ್ರೀಡಾಂಗಣದ ಮೇಲ್ಭಾಗದಲ್ಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿರ್ಮಾಣವಾಗುತ್ತಿದ್ದು, ಇದಕ್ಕೆ ಗ್ರಿಲ್ ಅಳವಡಿಸಬೇಕು. ಅತ್ಯಾಧುನಿಕ ಮೀಡಿಯಾ ಸೆಂಟರ್ ನಿರ್ಮಿಸುವ ಅಗತ್ಯವಿದೆ. ಅಥ್ಲೆಟಿಕ್ ಸಿಂಥೆಟಿಕ್ ಟ್ರ್ಯಾಕ್‍ಗೆ ಹೊಂದಿಕೊಂಡಂತೆ ಫೋಟೊ ಫಿನಿಷಿಂಗ್ ಸೆಂಟರ್ ಒದಗಿಸಬೇಕು. ಅಥ್ಲೆಟಿಕ್ ಕ್ರೀಡಾಪಟುಗಳ ತರಬೇತಿ ಮತ್ತು ಸ್ಪರ್ಧೆಗೆ ವೈಟ್‍ಲಿಫ್ಟಿಂಗ್ ಸೆಂಟರ್ ಕಲ್ಪಿಸಬೇಕು. ವಿವಿಐಪಿ ಸಭಾಂಗಣ, ಅಡುಗೆ ಕೋಣೆ ನಿರ್ಮಿಸಬೇಕು, ಯೋಗ, ಧ್ಯಾನ ಕೇಂದ್ರ ನಿರ್ಮಿಸುವುದರಿಂದ ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ADVERTISEMENT

ಕ್ರೀಡಾಂಗಣದ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೂರನೇ ಮಹಡಿಯಲ್ಲಿ ರೈಫಲ್ ಶೂಟಿಂಗ್ ಅಭ್ಯಾಸಕ್ಕೆ ಅವಕಾಶ, ಟೇಬಲ್ ಟೆನ್ನಿಸ್ ಕೋರ್ಟ್ ನಿರ್ಮಾಣ, ಹೊರಾಂಗಣ ಕ್ರೀಡಾಂಗಣದಲ್ಲಿ ಅಥ್ಲೆಟಿಕ್, ಫುಟ್‍ಬಾಲ್, ಒಳಾಂಗಣ ಕ್ರೀಡಾಂಗಣದಲ್ಲಿ ವಾಲಿಬಾಲ್, ಕಬಡ್ಡಿ, ಬಾಸ್ಕೆಟ್ ಬಾಲ್, ಶೆಟಲ್ ಬ್ಯಾಡ್ಮಿಂಟನ್, ಜಿಮ್ನಾಸ್ಟಿಕ್‌ಗೂ ಅವಕಾಶ ಮಾಡಬೇಕು ಎಂದು ಕೇಳಿಕೊಂಡರು.

ಕ್ರೀಡಾಂಗಣದ ಕಾಮಗಾರಿ ಪರಿಶೀಲಿಸಿದ ಶಾಸಕರು, ಸೆಪ್ಟೆಂಬರ್ ಅಂತ್ಯದೊಳಗೆ ಕಾಮಗಾರಿ ಮುಗಿಸಲು ಎಂಜಿನಿಯರುಗಳಿಗೆ ಸೂಚಿಸಿದರು.

ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಮಟ್ಟದ 8 ಮಾರ್ಗದ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣವಾಗಲಿದೆ. 500 ಕ್ರೀಡಾಪಟುಗಳು, 100 ಮಂದಿ ತೀರ್ಪುಗಾರರು ಉಳಿದುಕೊಳ್ಳಲು ವಸತಿ ಸೌಕರ್ಯವೂ ಇರಲಿದೆ. ಅಡುಗೆ ಕೋಣೆ, ಅಂಗವಿಕಲ ಕ್ರೀಡಾಪಟುಗಳಿಗೆ ಪ್ರತ್ಯೇಕ ಗ್ಯಾಲರಿ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್, ಅಥ್ಲೆಟಿಕ್ ಕೋಚ್ ಶಿವಪ್ರಸಾದ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹರಾಜು, ರಾಕ್‍ಲೈನ್ ರವಿಕುಮಾರ್, ಪ್ರದೀಪ್, ಗುರುಪ್ರಸಾದ್, ಪ್ರಭಾಕರ್, ಅನಿಲ್, ಚೇತನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.