ADVERTISEMENT

206 ಹೆದ್ದಾರಿ; 16ರಂದು ಚತುಷ್ಪಥ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ

ಕಿಬ್ಬನಹಳ್ಳಿ ಕ್ರಾಸ್‌ನಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರಿಂದ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 10:54 IST
Last Updated 15 ಡಿಸೆಂಬರ್ 2018, 10:54 IST
ಸಂಸದ ಎಸ್.‍ಪಿ.ಮುದ್ದಹನುಮೇಗೌಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ಸಂಸದ ಎಸ್.‍ಪಿ.ಮುದ್ದಹನುಮೇಗೌಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು   

ತುಮಕೂರು: 'ರಾಷ್ಟ್ರೀಯ ಹೆದ್ದಾರಿ 206 ಚತುಷ್ಪಥ ನಿರ್ಮಾಣ ಕಾಮಗಾರಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಡಿ.16 ರಂದು ಕಿಬ್ಬನಹಳ್ಳಿ ಕ್ರಾಸ್ ನಲ್ಲಿ ಬೆಳಿಗ್ಗೆ 11 ಗಂಟೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ' ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 'ರಾಷ್ಟ್ರೀಯ ಹೆದ್ದಾರಿ 206 ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ತುಮಕೂರು ನಗರ, ತುಮಕೂರು ಗ್ರಾಮಾಂತರ, ಗುಬ್ಬಿ, ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಹೆದ್ದಾರಿ. ಇಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಷಾಗಿದ್ದರಿಂದ ಚತುಷ್ಪಥ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಮೇಲೆ ಸತತ ಒತ್ತಡ ಹಾಕಿದ ಪರಿಣಾಮ ಕಾಮಗಾರಿ ಮಂಜೂರಾಗಿದೆ’ ಎಂದು ಹೇಳಿದರು.

‘ಈ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ಶಿವಮೊಗ್ಗ ಜಿಲ್ಲೆಯವರೆಗೂ ನಡೆಯಲಿದೆ. ಈ ಹೆದ್ದಾರಿ ಒಂದು ರೀತಿಯಲ್ಲಿ ನಮ್ಮ ಜಿಲ್ಲೆಗೆ ಬೆನ್ನು ಮೂಳೆ ಇದ್ದ ಹಾಗಿದೆ. ಭವಿಷ್ಯದಲ್ಲಿ ಸಾರ್ವಜನಿಕರಿಗೆ ತುಂಬಾ ಅನುಕೂಲ ಆಗಲಿದೆ’ ಎಂದರು.

ADVERTISEMENT

‘ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಕೆಲ ರೈತರ ಆಕ್ಷೇಪಗಳಿದ್ದು, ಭಾನುವಾರ ಶಂಕು ಸ್ಥಾಪನೆ ಬಳಿಕ ಉಪಮುಖ್ಯಮಂತ್ರಿ ಅವರ ಸಮ್ಮುಖದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಪರಿಹರಿಸುವ ಪ್ರಯತ್ನ ಮಾಡಲಾಗುವುದು’ ಎಂದು ಹೇಳಿದರು.

‘ಹೆದ್ದಾರಿ ಪ್ರಾಧಿಕಾರದ ಮೇಲೆ ಸತತ ಒತ್ತಡ ಹೇರಿ ರೈತರಿಗೆ ಹೆಚ್ಚಿನ ಪರಿಹಾರ ದೊರಕಿಸಿ ಕೊಡುವ ಪ್ರಯತ್ನ ಮಾಡಿದ್ದೇನೆ’ ಎಂದು ವಿವರಿಸಿದರು.

‘ಈ ಹೆದ್ದಾರಿ ಚತುಷ್ಪಥ ನಿರ್ಮಾಣ ಅಗತ್ಯತೆಯನ್ನು ಮನಗಂಡು ನಾಲ್ಕು ವರ್ಷಗಳ ಹಿಂದೆಯೇ ಚಿಂತನೆ ಮಾಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಹೆದ್ದಾರಿ ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡಲಾಯಿತು. ಅಲ್ಲದೇ ಈ ಹೆದ್ದಾರಿ ಚತುಷ್ಪಥ ಆಗಲೇಬೇಕು ಎಂಬ ಕಾರಣಕ್ಕೆ 31 ಸಂಸದರು ಸದಸ್ಯರು ಇರುವ ಕೇಂದ್ರ ಭೂ ಸಾರಿಗೆ ಇಲಾಖೆ ಸಮಿತಿ( ಸರ್ಫೇಸ್ ಟ್ರಾನ್ಸ್‌ಪೋರ್ಟ್ ಡಿಪಾರ್ಟ್‌ಮೆಂಟ್) ಸದಸ್ಯನಾಗಿ ಪ್ರಯತ್ನ ಮಾಡಿದೆ. ಆ ಪ್ರಯತ್ನ ಈಗ ಯಶ ಕಂಡಿದೆ’ ಎಂದು ತಿಳಿಸಿದರು.

ಚತುಷ್ಪಥ ನಿರ್ಮಾಣ ಕಾಮಗಾರಿಗೆ ಹೆದ್ದಾರಿ ಅಕ್ಕಪಕ್ಕದ ಮರ ಕಡಿಯುವ ಕಾರ್ಯವನ್ನು ಭಾನುವಾರದ ನಂತರ ಗುತ್ತಿಗೆ ಸಂಸ್ಥೆಯು ಕೈಗೊಳ್ಳಲಿದೆ. ಹೆದ್ದಾರಿ ಪ್ರಾಧಿಕಾರ ಕಾಮಗಾರಿ ಪ್ರಾರಂಭಿಸಲು ಸಿದ್ಧವಿದ್ದರೂ ಹೆದ್ದಾರಿ ಅಕ್ಕಪಕ್ಕದ ಮರಗಳನ್ನು ಕಡಿಯಲು ರಾಜ್ಯ ಸರ್ಕಾರದ ಅನುಮತಿ ಬೇಕಿತ್ತು. ಈ ಕಾರಣದಿಂದ ವಿಳಂಬವಾಗಿತ್ತು. ಈ ಸರ್ಕಾರ ಒಪ್ಪಿಗೆ ನೀಡಿದ್ದು, ಕಾಮಗಾರಿ ಪ್ರಾರಂಭ ಮಾಡಲಾಗುತ್ತಿದೆ ಎಂದು ಹೇಳಿದರು.

97 ಕಿ.ಮೀಯ ( ತುಮಕೂರು ಲೋಕಸಭಾ ವ್ಯಾಪ್ತಿ) ಈ ಚತುಷ್ಪಥ ಹೆದ್ದಾರಿಯಲ್ಲಿ ಕಿಬ್ಬನಹಳ್ಳಿ ಕ್ರಾಸ್ ಹತ್ತಿರ ಒಂದು ಕಡೆ ‘ಟೋಲ್’ ವ್ಯವಸ್ಥೆಗೆ ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದರು.

‘ಭಾನುವಾರ ಬೆಳಿಗ್ಗೆ ನಡೆಯುವ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಚಿವರಾದ ವೆಂಕಟರಮಣಪ್ಪ, ಎಸ್.ಆರ್.ಶ್ರೀನಿವಾಸ್, ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ಅಂಕಿ ಅಂಶ

* 97 ಕಿ.ಮೀ ತುಮಕೂರು ಜಿಲ್ಲೆಯಲ್ಲಿ ಹಾದು ಹೋಗಿರುವ ಹೆದ್ದಾರಿ

* ₹ 2032 ಕೋಟಿ ಚತುಷ್ಪಥ ಕಾಮಗಾರಿ ಮೊತ್ತ

*₹ 700 ಕೋಟಿ ಭೂಸ್ವಾಧೀನಕ್ಕೆ ನಿಗದಿಪಡಿಸಿದ ಪರಿಹಾರ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.