ADVERTISEMENT

ತುಮಕೂರು: ಎಚ್‌ಐವಿ ಸೋಂಕಿನ ರಕ್ತ ನೀಡಿದ ಶ್ರೀದೇವಿ ಆಸ್ಪತ್ರೆಗೆ ದಂಡ

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ಮಹತ್ವದ ಆದೇಶ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 2:58 IST
Last Updated 8 ಅಕ್ಟೋಬರ್ 2025, 2:58 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ರೋಗಿಯೊಬ್ಬರಿಗೆ ಎಚ್‌ಐವಿ ಸೋಂಕಿನ ರಕ್ತ ನೀಡಿದ್ದ ಆರೋಪ ಎದುರಿಸುತ್ತಿದ್ದ ನಗರದ ಶ್ರೀದೇವಿ ವೈದ್ಯಕೀಯ ಆಸ್ಪತ್ರೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ.

ಆರೋಗ್ಯ ಸೇವೆಯಲ್ಲಿ ನಿರ್ಲಕ್ಷ್ಯ ಹಾಗೂ ಸೇವಾ ಲೋಪವನ್ನು ಪರಿಗಣಿಸಿ ₹50 ಸಾವಿರ ಪರಿಹಾರ, ನ್ಯಾಯಾಲಯ ವೆಚ್ಚವಾಗಿ ₹8 ಸಾವಿರ ಪಾವತಿಸುವಂತೆ ಶ್ರೀದೇವಿ ವೈದ್ಯಕೀಯ ಆಸ್ಪತ್ರೆ ಮುಖ್ಯ ಆಡಳಿತಾಧಿಕಾರಿ ಡಾ.ಎಂ.ಆರ್.ಹುಲಿನಾಯ್ಕರ್, ಆಸ್ಪತ್ರೆ ಸೂಪರಿಂಟೆಂಡೆಂಟ್ ಹಾಗೂ ತಜ್ಞ ವೈದ್ಯ ಚೇತನ್ ಅವರಿಗೆ ಆದೇಶಿಸಿದೆ.

ದೂರುದಾರರು ₹20 ಲಕ್ಷ ಪರಿಹಾರ, ₹2 ಲಕ್ಷ ನಷ್ಟ ಪರಿಹಾರ, ಮಾನಸಿಕ ಹಿಂಸೆ ಅನುಭವಿಸಿದ್ದಕ್ಕಾಗಿ ₹50 ಸಾವಿರ ಪರಿಹಾರ ಕೋರಿ ಆಯೋಗದ ಮೆಟ್ಟಿಲೇರಿದ್ದರು. ಆದರೆ ₹50 ಸಾವಿರ ದಂಡವನ್ನಷ್ಟೇ ಆಯೋಗ ವಿಧಿಸಿದೆ.

ADVERTISEMENT

ಪ್ರಕರಣದ ಹಿನ್ನೆಲೆ: ನಗರದ ಹೊರ ವಲಯದ ಕೆಸರುಮಡು ರಸ್ತೆಯ ಹಳ್ಳಿಯೊಂದರ 80 ವರ್ಷದ ವೃದ್ಧರೊಬ್ಬರು (ಎಚ್‌ಐವಿ ಸೋಂಕು ಇರುವುದರಿಂದ ರೋಗಿ ಹೆಸರು ಬರೆದಿಲ್ಲ) ರಕ್ತ ಹೀನತೆ ಹಾಗೂ ರಕ್ತ ಸೋರಿಕೆ ತಡೆಗೆ ಚಿಕಿತ್ಸೆ ಪಡೆಯುವ ಸಲುಗಾಗಿ 14–07–2023ರಂದು ಶ್ರೀದೇವಿ ವೈದ್ಯಕೀಯ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಮಯದಲ್ಲಿ ಮೂರು ಯೂನಿಟ್ ರಕ್ತವನ್ನು ನೀಡಲಾಗಿತ್ತು. ಚಿಕಿತ್ಸೆಗೆ ಮುನ್ನ ರೋಗಿ ಪರೀಕ್ಷಿಸಿದ್ದು, ಎಚ್‌ಐವಿ ಸೋಂಕಿನ ಲಕ್ಷಣಗಳು ಕಂಡು ಬಂದಿರಲಿಲ್ಲ. ಇದಕ್ಕೂ ಮುನ್ನ 03–01–2023ರಂದು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಹೃದ್ರೋಗಕ್ಕೆ ಚಿಕಿತ್ಸೆ ಪಡೆದಿದ್ದು, ಅಲ್ಲೂ ಎಚ್‌ಐವಿ ಪರೀಕ್ಷೆ ಮಾಡಿಸಲಾಗಿತ್ತು. ಆಗಲೂ ಎಚ್‌ಐವಿ ಸೋಂಕು ಪತ್ತೆಯಾಗಿರಲಿಲ್ಲ.

2023 ನವೆಂಬರ್‌ನಲ್ಲಿ ಮತ್ತೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಆ ಸಮಯದಲ್ಲಿ ರಕ್ತ ಪರೀಕ್ಷೆ ಮಾಡಿಸಿದ್ದು, ಎಚ್‌ಐವಿ ಸೋಂಕು ಇರುವುದು ಪತ್ತೆಯಾಗಿತ್ತು. ಇದರಿಂದ ರೋಗಿ ಹಾಗೂ ಅವರ ಕುಟುಂಬ ಆತಂಕಕ್ಕೆ ಒಳಗಾಗಿತ್ತು. ಕುಟುಂಬದವರು, ಬಂಧುಗಳು ಅವರಿಂದ ದೂರವಾದರು. 80 ವರ್ಷದ ಇಳಿ ವಯಸ್ಸಿನಲ್ಲಿ ಅವರನ್ನು ನೋಡಿಕೊಳ್ಳಲು ಯಾರು ಮುಂದೆ ಬಾರದೆ ಮಾನಸಿಕ ಹಿಂಸೆ ಅನುಭವಿಸಿದ್ದರು ಎಂದು ಆಯೋಗಕ್ಕೆ ಸಲ್ಲಿಸಿದ್ದ ದೂರಿನಲ್ಲಿ ತಿಳಿಸಲಾಗಿತ್ತು.

2023 ಜುಲೈನಲ್ಲಿ ಶ್ರೀದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದ ನಂತರ ಮನೆಯಿಂದ ಹೊರಗೆ ಹೋಗಿಲ್ಲ. ಇಳಿ ವಯಸ್ಸಿನಲ್ಲಿ ಓಡಾಡಲು ಬೇರೆಯವರನ್ನು ಆಶ್ರಯಿಸಿದ್ದಾರೆ. ಜಯದೇವ ಆಸ್ಪತ್ರೆ, ಶ್ರೀದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸಮಯದಲ್ಲಿ ಎಚ್‌ಐವಿ ಸೋಂಕು ಇರುವುದು ಪತ್ತೆಯಾಗಿಲ್ಲ. ಶ್ರೀದೇವಿ ಆಸ್ಪತ್ರೆಯಲ್ಲಿ ರಕ್ತ ಪಡೆದುಕೊಂಡ ನಂತರ ಈ ಸೋಂಕು ಕಂಡು ಬಂದಿದೆ. ಎಚ್‌ಐವಿ ಸೋಂಕು ಇರುವ ರಕ್ತ ನೀಡಿದ್ದರಿಂದಲೇ ಆ ರೋಗಕ್ಕೆ ಸಿಲುಕಿದಂತಾಗಿದೆ. ಆಸ್ಪತ್ರೆಯಲ್ಲಿ ರಕ್ತವನ್ನು ಸರಿಯಾಗಿ ಪರೀಕ್ಷೆಗೆ ಒಳಪಡಿಸದಿರುವುದು, ಎಚ್ಚರ ವಹಿಸದಿರುವುದು, ಸೇವಾ ನ್ಯೂನತೆಯಿಂದಾಗಿ ಎಚ್ಐವಿ ಪೀಡಿತರಾಗಬೇಕಾಗಿದೆ ಎಂದು ರೋಗಿ ಪರ ವಕೀಲರು ವಾದ ಮಂಡಿಸಿದ್ದರು.

ಆಸ್ಪತ್ರೆ ನಿಲುವು: ಎಲ್ಲ ರೀತಿಯಲ್ಲೂ ಪರೀಕ್ಷೆ ಮಾಡಿದ ನಂತರವೇ ರೋಗಿಗೆ ರಕ್ತ ನೀಡಲಾಗಿದೆ. ದಾನಿಗಳಿಂದ ರಕ್ತ ಪಡೆದುಕೊಂಡ ಸಮಯದಲ್ಲಿ ಪರೀಕ್ಷೆ ನಡೆಸಿ ರಕ್ತನಿಧಿ ಕೇಂದ್ರದಲ್ಲಿ ಇಡಲಾಗಿತ್ತು. ಅದೇ ರಕ್ತವನ್ನು ರೋಗಿಗೆ ನೀಡಲಾಗಿದೆ. ಚಿಕಿತ್ಸೆ ಪಡೆದುಕೊಂಡ ನಾಲ್ಕು ತಿಂಗಳ ನಂತರ ಎಚ್‌ಐವಿ ಸೋಂಕು ಇರುವುದು ಪತ್ತೆಯಾಗಿದೆ. ನಮ್ಮ ಸೇವೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಆಸ್ಪತ್ರೆ ಪರ ವಕೀಲರು ವಾದಿಸಿದ್ದರು.

ಆಯೋಗದ ಪರಾಮರ್ಶೆ: ಆಸ್ಪತ್ರೆಯಲ್ಲಿ ರಕ್ತ ನೀಡಿದ್ದರಿಂದಲೇ ಎಚ್‌ಐವಿ ಸೋಂಕು ತಗುಲಿಗೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ಈ ಬಗ್ಗೆ ತಜ್ಞರ ವರದಿ ಸಲ್ಲಿಸಿಲ್ಲ. 2023ರ ಜುಲೈ– ನವೆಂಬರ್ ನಡುವೆ ಶ್ರೀದೇವಿ ಆಸ್ಪತ್ರೆ ಹೊರತುಪಡಿಸಿ ಬೇರೆಡೆ ಚಿಕಿತ್ಸೆ ಪಡೆದುಕೊಂಡಿರುವ ಸಾಧ್ಯತೆಗಳ ಬಗ್ಗೆ ದಾಖಲೆ ಸಲ್ಲಿಸಿಲ್ಲ ಎಂಬುದನ್ನು ಆಯೋಗ ಮನಗಂಡಿದೆ.

ಆದರೆ ಆಸ್ಪತ್ರೆಯ ಪ್ರಮುಖ ಲೋಪವನ್ನು ಗುರುತಿಸಿದೆ. ರೋಗಿಗೆ ಮೂರು ಯೂನಿಟ್ ರಕ್ತ ನೀಡಿರುವುದನ್ನು ಆಸ್ಪತ್ರೆ ಒಪ್ಪಿಕೊಂಡಿದೆ. ಆದರೆ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿರುವ ಪತ್ರದಲ್ಲಿ ಮೂರನೇ ಯೂನಿಟ್ ರಕ್ತ ನೀಡಿದ ಮಾಹಿತಿ ದಾಖಲಿಸಿಲ್ಲ. ಮೂರನೇ ಯೂನಿಟ್‌ನ ರಕ್ತದ ಪರೀಕ್ಷೆ ಹಾಗೂ ಮತ್ತಿತರ ವಿವರಗಳನ್ನು ಸಲ್ಲಿಸಿಲ್ಲ. ರೋಗಿಯ ವೈದ್ಯಕೀಯ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸದಿರುವುದು ಕಂಡು ಬರುತ್ತದೆ. ಹಾಗಾಗಿ ಈ ಸೇವಾ ಲೋಪಕ್ಕಾಗಿ ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಆಯೋಗದ ಅಧ್ಯಕ್ಷೆ ಜಿ.ಟಿ.ವಿಜಯಲಕ್ಷ್ಮಿ, ಸದಸ್ಯೆ ನಿವೇದಿತಾ ರವೀಶ್ ನೇತೃತ್ವದ ಪೀಠ ಈಚೆಗೆ ಈ ಆದೇಶ ನೀಡಿದೆ. ರೋಗಿ ಪರವಾಗಿ ವಕೀಲ ನರಸಿಂಹಯ್ಯ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.