ADVERTISEMENT

‘ಎಲ್ಲರಿಗೂ ಮನೆ’ ಆಂದೋಲನ: ಸಂಸದ ಜಿ.ಎಸ್.ಬಸವರಾಜ್

100 ದಿವಸದೊಳಗೆ ನಿವೇಶನ ಪ್ರಕ್ರಿಯೆ ಪೂರ್ಣಗೊಳಿಸಲು ಸಂಸದ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 3:04 IST
Last Updated 9 ಸೆಪ್ಟೆಂಬರ್ 2020, 3:04 IST
ಜಿ.ಎಸ್.ಬಸವರಾಜ್
ಜಿ.ಎಸ್.ಬಸವರಾಜ್   

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವಂತೆ 2022ರ ವೇಳೆಗೆ ಜಿಲ್ಲೆಯ ಎಲ್ಲರಿಗೂ ಸೂರು ಯೋಜನೆ ಶೇ 100ರಷ್ಟು ಜಾರಿಯಾಗಬೇಕು. ಇದಕ್ಕಾಗಿ ಮುಂದಿನ 100 ದಿನಗಳು ಜಿಲ್ಲೆಯಾದ್ಯಂತ ‘ಎಲ್ಲರಿಗೂ ಮನೆ–2022’ ಆಂದೋಲನ ನಡೆಸಿ ಅಂತಿಮ ರೂಪುರೇಷೆ ಸಿದ್ಧಪಡಿಸಬೇಕು ಎಂದು ಸಂಸದ ಜಿ.ಎಸ್.ಬಸವರಾಜ್ ಅಧಿಕಾರಿಗಳಿಗೆ ಸೂಚಿಸಿದರು.

ಮಹಾನಗರ ಪಾಲಿಕೆ, ತುಮಕೂರು ಗ್ರಾಮಾಂತರ ಹಾಗೂ ಗುಬ್ಬಿ ತಾಲ್ಲೂಕು ವ್ಯಾಪ್ತಿಯ ನಿವೇಶನ ರಹಿತರಿಗೆ ಸರ್ಕಾರಿ ಜಮೀನುಹುಡುಕುವ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಎಲ್ಲರಿಗೂ ಮನೆ–2022’ ನಗರ ವ್ಯಾಪ್ತಿಯ ಯೋಜನೆಗೆ ಜಿಲ್ಲಾಧಿಕಾರಿ, ಗ್ರಾಮೀಣ ವ್ಯಾಪ್ತಿಯ ಯೋಜನೆಗೆ ಜಿಲ್ಲಾ ಪಂಚಾಯಿತಿ ಸಿಇಒ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 330 ಗ್ರಾಮೀಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿವೇಶನ ಮತ್ತು ವಸತಿ ರಹಿತರ ಪಟ್ಟಿಯನ್ನು ಬೂತ್ ವ್ಯಾಪ್ತಿಯಲ್ಲಿ ಅಥವಾ ಗ್ರಾಮ ವ್ಯಾಪ್ತಿಯಲ್ಲಿ ಪ್ರಕಟಿಸಬೇಕು ಎಂದು ಹೇಳಿದರು.

ADVERTISEMENT

ಗ್ರಾಮೀಣ ಪ್ರದೇಶಗಳಲ್ಲಿ ಪಿಡಿಒ, ಇಒ ನಿವೇಶನ ರಹಿತರ ಮತ್ತು ವಸತಿ ರಹಿತರ ಪಟ್ಟಿಯನ್ನು ಗ್ರಾಮವಾರು ಅಥವಾ ಬೂತ್‌ವಾರು ಪ್ರಕಟಿಸಬೇಕು. ನಗರ ಪ್ರದೇಶಗಳಲ್ಲಿ ಆರ್‌ಒ ಮತ್ತು ಆಯುಕ್ತರು, ನಿವೇಶನ ರಹಿತರ ಮತ್ತು ವಸತಿ ರಹಿತರ ಪಟ್ಟಿಯನ್ನು ಪ್ರಕಟಿಸಬೇಕು. ಕೊಳಚೆ ಪ್ರದೇಶಗಳಲ್ಲಿ ಎಂಜಿನಿಯರ್ಪ್ರಕಟಿಸಬೇಕು ಎಂದು ತಿಳಿಸಿದರು.

ವಸತಿ ಸಚಿವ ವಿ.ಸೋಮಣ್ಣ ಈಗಾಗಲೇ ಜಿಲ್ಲೆಗೆ ಅಲೆಮಾರಿ ಜನಾಂಗದವರಿಗೆ, ಕೊಳಚೆ ಪ್ರದೇಶದವರಿಗೆ ಮತ್ತು ಗ್ರಾಮ ಪಂಚಾಯ್ತಿವಾರು ಮನೆಗಳನ್ನು ಮಂಜೂರು ಮಾಡಿದ್ದಾರೆ. ಇವುಗಳ ಪಲಾನುಭವಿಗಳ ಆಯ್ಕೆ ಪಾರದರ್ಶಕವಾಗಿರಬೇಕು. ನಿವೇಶನ, ವಸತಿ ರಹಿತರ ಪ್ರಕಟಿಸಿದ ಪಟ್ಟಿಯೇ ಮೂಲಮಂತ್ರವಾಗಬೇಕು. ಕಾಲಮಿತಿಯಲ್ಲಿ ಪಲಾನುಭವಿಗಳ ಆಯ್ಕೆ ಪೂರ್ಣಗೊಳಿಸಬೇಕು. ಈ ಪ್ರಕ್ರಿಯೆ ಮುಂದಿನ 100 ದಿವಸದೊಳಗೆ ಪೂರ್ಣವಾಗಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್‌, ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.