ADVERTISEMENT

ರಸ್ತೆ ಮೇಲೆ ಹರಿದ ನೀರು– ಸಂಚಾರಕ್ಕೆ ಅಡ್ಡಿ, ಮಳೆಗೆ ಕುಸಿದ ಮನೆ ಗೋಡೆ

ತುಂಬಿ ಹರಿದ ಕೆರೆ, ಕಟ್ಟೆಗಳು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 5:42 IST
Last Updated 23 ಅಕ್ಟೋಬರ್ 2021, 5:42 IST
ತುರುವೇಕೆರೆ ತಾಲ್ಲೂಕಿನ ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳೇಕೆರೆ ಗ್ರಾಮದ ಬಸವರಾಜು ಅವರ ಮನೆಯ ಗೋಡೆ ಕುಸಿದಿದೆ (ಎಡಚಿತ್ರ), ಕಳ್ಳನಕೆರೆ-ಗೊಟ್ಟಿಕೆರೆ ಬಳಿ ಹುಣಸೆ ಮರ ಬುಡಮೇಲಾಗಿ ಬಿದ್ದಿದೆ
ತುರುವೇಕೆರೆ ತಾಲ್ಲೂಕಿನ ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳೇಕೆರೆ ಗ್ರಾಮದ ಬಸವರಾಜು ಅವರ ಮನೆಯ ಗೋಡೆ ಕುಸಿದಿದೆ (ಎಡಚಿತ್ರ), ಕಳ್ಳನಕೆರೆ-ಗೊಟ್ಟಿಕೆರೆ ಬಳಿ ಹುಣಸೆ ಮರ ಬುಡಮೇಲಾಗಿ ಬಿದ್ದಿದೆ   

ತುರುವೇಕೆರೆ: ತಾಲ್ಲೂಕಿನಾದ್ಯಂತ ಗುರುವಾರ ರಾತ್ರಿ ಸುರಿದ ಮಳೆಯಿಂದ ಕೆಲವೆಡೆ ಮನೆಗಳು, ವಿದ್ಯುತ್ ಕಂಬಗಳು ಹಾಗೂ ಮರಗಳ
ನೆಲಕಚ್ಚಿವೆ.

ತಾಲ್ಲೂಕಿನ ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳೇಕೆರೆ ಗ್ರಾಮದ ಬಸವರಾಜು ಅವರ ಮನೆಯ ಗೋಡೆ ಕುಸಿದು, ಮನೆಯಲ್ಲಿದ್ದ ಕೃಷಿ ಪರಿಕರಗಳು ಹಾನಿಯಾಗಿವೆ. ಸಂಗ್ಲಾಪುರ ಗ್ರಾಮದ ಚಿಕ್ಕೀರೆಗೌಡ, ಮಾಯಸಂದ್ರ ಹೋಬಳಿಯ ಡಿ.ಎನ್.ಪುರದ ಗೌರಮ್ಮ ಅವರ ಮನೆಯ ಗೋಡೆ ಕುಸಿದು, ಮನೆಯಲ್ಲಿದ್ದ ಪರಿಕರಗಳು ಮಳೆಗೆ ನೆನೆದಿವೆ.

ದಂಡಿನಶಿವರ ಹೋಬಳಿಯ ಅಮ್ಮಸಂದ್ರದ ಬಳಿ ಜಾಲಿ ಮರ ಬುಡ ಸಮೇತ ಕಿತ್ತು, ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ಜಾಲಿ ಮರ ರಸ್ತೆಗೆ ಬಿದ್ದ ಕೆಲ ಸಮಯ ಸಂಚಾರಕ್ಕೆ ಅಡಚಣೆಯುಂಟಾಗಿತ್ತು.

ADVERTISEMENT

ಕಳ್ಳನಕೆರೆ-ಗೊಟ್ಟಿಕೆರೆ ಬಳಿ ಹುಣಸೇ ಮರ ಬಿದ್ದು ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ ಎಂದು ಬೆಸ್ಕಾಂ ಎಇಇ ಚಂದ್ರಾನಾಯ್ಕ್ ತಿಳಿಸಿದ್ದಾರೆ.

ಚಿಮ್ಮನಹಳ್ಳಿ-ದೊಂಬರನಹಳ್ಳಿ ಹಳ್ಳಿದ ನೀರು ರಸ್ತೆ ಮೇಲೆ ರಭಸವಾಗಿ ಹರಿದು ವಿದ್ಯಾರ್ಥಿಗಳು, ಗ್ರಾಮಸ್ಥರ ಸಂಚಾರಕ್ಕೆ ತೊಂದರೆಯಾಗಿತ್ತು. ಕೊಂಡಜ್ಜಿ ಹಳ್ಳಿ, ಮಾದಿಹಳ್ಳಿ-ಅರಳೀಕೆರೆ ಹಳ್ಳಗಳು ರಸ್ತೆ ಮೇಲೆ ನೀರು ಹರಿಯುತ್ತಿದ್ದು ಸಂಚಾರಕ್ಕೆ ಅಡಚಣೆಯಾಗಿತ್ತು.

ತಾಲ್ಲೂಕಿನ ದಂಡಿನಶಿವರ, ಮಾಯಸಂದ್ರ, ದಬ್ಬೇಘಟ್ಟ ಮತ್ತು ಕಸಬಾ ವ್ಯಾಪ್ತಿಯಲ್ಲಿ ಬಿತ್ತನೆಯಾಗಿರುವ ಮುಂಗಾರು ಬೆಳೆಗಳಾದ ರಾಗಿ, ಜೋಳ, ತೊಗರಿ, ಅವರೆ, ಹರಳು, ಹುರುಳಿ, ಸಾಸುವೆ, ಹುಚ್ಚೆಳ್ಳು, ತೆಂಗು, ಅಡಿಕೆ, ಬಾಳೆ ಚೆನ್ನಾಗಿ ಬೆಳೆದು ಹಸಿರಿನಿಂದ ಕಂಗೊಳಿಸುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಕೆಲವೆಡೆ ರಾಗಿ ತೆನೆಯೊಡೆದಿದ್ದು ಹದ ಮಳೆಗೆ ರಾಗಿ ತೆನೆ ನೆಲಕಚ್ಚಿದೆ. ಹೊಲ, ತೋಟ ಸಾಲುಗಳಲ್ಲಿ ಜೋಳದ ಮೇವು ನೆಲಕಚ್ಚಿದ್ದು, ರೈತರಲ್ಲಿ ಆತಂಕ ಹೆಚ್ಚಿಸಿದೆ.

ಹೊಲ, ಗದ್ದೆ, ತೋಟ, ಚೆಕ್ ಡ್ಯಾಂ, ಕೃಷಿ ಹೊಂಡ, ಹಳ್ಳಸಾಲು, ಕಟ್ಟೆಗಳಲ್ಲಿ ಮಳೆಯ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿದೆ. ಕಸಬಾ 92 ಮಿ.ಮೀ, ದಂಡಿನಶಿವರ 75.2, ಮಾಯಸಂದ್ರ 72.2, ದಬ್ಬೇಘಟ್ಟ 30.6, ಸಂಪಿಗೆಯಲ್ಲಿ 58 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.