ಹುಳಿಯಾರು: ತುರ್ತು ಪರಿಸ್ಥಿತಿಯಲ್ಲಿ ಸ್ವಯಂ ಸೇವಕರು ನೀಡಿದ ಬಲಿದಾನವನ್ನು ಇಂದಿನ ಪೀಳಿಗೆ ಮರೆಯಬಾರದು ಮತ್ತು ಯುವಜನರನಲ್ಲಿ ದೇಶಪ್ರೇಮ ಬೆಳೆಸಲು ಒತ್ತು ನೀಡಲಾಗುವುದು ಎಂದು ದಕ್ಷಿಣ ಪ್ರಾಂತ್ಯ ಬಾಲಗೋಕುಲ ಸಂಯೋಜಕ ಉಮೇಶ್ ತಿಳಿಸಿದರು.
ಪಟ್ಟಣದ ಪ್ರಸನ್ನ ಗಣಪತಿ ದೇಗುಲದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಮತ್ತು ವಿಜಯದಶಮಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಘದ ನೂರು ವರ್ಷಗಳ ಪ್ರಯಾಣವು ದೇಶದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಚಿತ್ರಣವನ್ನು ಬದಲಾಯಿಸಿದೆ ಎಂದು ನುಡಿದರು.
ಡಾ.ಕೇಶವ ಬಲಿರಾಂ ಹೆಡಗೇವಾರ್ ಅವರು 1925 ವಿಜಯದಶಮಿ ದಿನ ಸಂಘವನ್ನು ಸ್ಥಾಪಿಸಿದರು. ಹಿಂದೂ ಸಮಾಜವನ್ನು ಬಲಿಷ್ಠಗೊಳಿಸಿ, ಸಂಘಟಿತ ಶಕ್ತಿಯಿಂದ ಸಮಾಜ ರಕ್ಷಣೆ ಕಾರ್ಯ ಮಾಡುವುದು ಅವರ ಉದ್ದೇಶವಾಗಿತ್ತು ಎಂದು ವಿವರಿಸಿದರು.
ಸ್ವಾತಂತ್ರ್ಯ ಹೋರಾಟ, ದೇಶ ವಿಭಜನೆ ಮತ್ತು ತುರ್ತು ಪರಿಸ್ಥಿತಿ ಸಮಯದಲ್ಲಿ ಸಾವಿರಾರು ಸ್ವಯಂ ಸೇವಕರು ಪ್ರಾಣತ್ಯಾಗ ಮಾಡಿದ್ದಾರೆ ಎಂದು ಸ್ಮರಿಸಿದರು.
ಶಾಖೆಗಳು ಕೇವಲ ದೈಹಿಕ ವ್ಯಾಯಾಮದ ಕೇಂದ್ರಗಳಲ್ಲ. ಶ್ಲೋಕ, ದೇಶಭಕ್ತಿ ಗೀತೆಗಳು ಮತ್ತು ಮಹಾಪುರುಷರ ಕಥೆಗಳ ಮೂಲಕ ವ್ಯಕ್ತಿತ್ವ ನಿರ್ಮಾಣದ ಕೇಂದ್ರಗಳು ಎಂದು ಅಭಿಪ್ರಾಯಪಟ್ಟರು.
ಶತಮಾನೋತ್ಸವ ಸಂದರ್ಭದಲ್ಲಿ ಸಂಘ ‘ಪಂಚ ಪರಿವರ್ತನೆ’ ಸಂಕಲ್ಪವನ್ನು ಘೋಷಿಸಿದೆ. ಸ್ವದೇಶಿ ಎಂದರೆ ಕೇವಲ ಸ್ಥಳೀಯ ವಸ್ತುಗಳ ಬಳಕೆ ಮಾತ್ರವಲ್ಲ. ಜೀವನ ಶೈಲಿಯಲ್ಲೂ ಬದಲಾವಣೆ ತರುವುದು. ಮಕ್ಕಳಿಗೆ ಇಂಗ್ಲಿಷ್ ಕಲಿಸುವುದು ತಪ್ಪಿಲ್ಲ. ಆದರೆ, ಮಾತೃಭಾಷೆ ಗೌರವ ಮರೆಯಬಾರದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಸನ್ನ ಗಣಪತಿ ಸೇವಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಿ.ಎಸ್.ಮೋಹನ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.