ಕುಣಿಗಲ್: ಹಿಂದೆ ತಾಲ್ಲೂಕು ಕೇಂದ್ರ ಮತ್ತು ವಿಧಾನಸಭಾ ಕ್ಷೇತ್ರವಾಗಿದ್ದ ಈಗಿನ ಹುಲಿಯೂರುದುರ್ಗ ಹೋಬಳಿ ಕೇಂದ್ರದಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಎರಡು ದಶಕಗಳಿಂದ ಹೋರಾಟ ನಡೆಯುತ್ತಿದ್ದರೂ, ಫಲ ಸಿಕ್ಕಿಲ್ಲ.
ಹುಲಿಯೂರುದುರ್ಗದಲ್ಲಿ ವೀರಶೈವ ಲಿಂಗಾಯತರಿಗೆ ಸಿದ್ಧಗಂಗಾ ಮಠದಿಂದ ಒಂದು ಎಕರೆ ಜಮೀನು ನೀಡಿ ಅಂತ್ಯಸಂಸ್ಕಾರಕ್ಕೆ ನೆರವಾಗಿದ್ದರು. ಮುಸ್ಲಿಮರಿಗೆ ಸಮುದಾಯದಿಂದ ಸರ್ಕಾರವೇ ಸ್ವಾತಂತ್ರ ಪೂರ್ವದಲ್ಲಿ ಸ್ಮಶಾನಕ್ಕೆ ಜಮೀನು ನೀಡಿದ ದಾಖಲೆಗಳಿದ್ದು, ಇಂದಿಗೂ ಬಳಕೆಯಾಗುತ್ತಿದೆ.
ಇತರೆ ಸಮುದಾಯಗಳಿಗೆ ಸಾರ್ವಜನಿಕ ಸ್ಮಶಾನಕ್ಕೆ ಜಾಗವಿಲ್ಲದ ಕಾರಣ ಹುಲಿಯೂರುದುರ್ಗಕ್ಕೆ ಹೊಂದಿಕೊಂಡಿರುವ ರೈತರ ಜಮೀನಿನಲ್ಲಿ ಶವಸಂಸ್ಕಾರಕ್ಕೆ ಮೊರೆ ಹೋಗುತ್ತಿದ್ದಾರೆ.
2004ರಿಂದಲೂ ಸ್ಮಶಾನಕ್ಕಾಗಿ ಸ್ಥಳೀಯರು ಹೋರಾಟ ನಡೆಸುತ್ತಿದ್ದಾರೆ. 2004ರಲ್ಲಿ ಹುಲಿಯೂರುದುರ್ಗ ನಾಡಕಚೇರಿ ಮುಂದೆ ಸ್ಮಶಾನ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳಿಗಾಗಿ ಆಗ್ರಹಿಸಿ ಪ್ರತಿಭಟನೆ ಸಹ ನಡೆದಿತ್ತು. ವಿ.ಸೋಮಣ್ಣ ವಸತಿ ಸಚಿವರಾಗಿದ್ದಾಗ ಹುಲಿಯೂರುದುರ್ಗದಲ್ಲಿ ಸ್ಮಶಾನಕ್ಕೆ ಅಗತ್ಯ ಜಾಗ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರು. ನಂತರ ಸರ್ಕಾರ ಎರಡು ಎಕರೆ ಜಮೀನು ಲಕ್ಕಶೆಟ್ಟಿಪುರದ ಬಳಿ ಮಂಜೂರು ಮಾಡಿದೆ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಸ್ಮಶಾನದ ಅಭಿವೃದ್ಧಿಗಾಗಿ ಮುಕ್ತಿಧಾಮ ಅಭಿವೃದ್ಧಿ ಟ್ರಸ್ಟ ರಚನೆಯಾಗಿದ್ದು, ₹10 ಲಕ್ಷ ಅನುದಾನ ಸಹ ಬಿಡುಗಡೆಯಾಗಿತ್ತು. ಅಭಿವೃದ್ಧಿಗಾಗಿ ಪ್ರಾರಂಭವಾಗಿದ್ದ ಟ್ರಸ್ಟ್ ಸ್ಥಗಿತಗೊಂಡ ಪರಿಣಾಮ ಸ್ಮಶಾನದ ಅಭಿವೃದ್ಧಿಯೂ ಸ್ಥಗಿತಗೊಂಡಿದೆ.
ಕಂದಾಯ ಇಲಾಖೆ ಅಧಿಕಾರಿಗಳು ಸ್ಮಶಾನದ ಜಮೀನು ಗ್ರಾಮ ಪಂಚಾಯಿತಿ ವಶಕ್ಕೆ ನೀಡಲಾಗಿದೆ ಎಂದು ತಿಳಿಸಿದ್ದರೂ, ಪಂಚಾಯಿತಿ ವಶಕ್ಕೆ ಬಂದಿಲ್ಲ ಎಂದು ಗ್ರಾಮಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.
2019ರಲ್ಲಿ ಸರ್ಕಾರದಿಂದ ಎರಡು ಎಕರೆ ಜಮೀನು ಸಾರ್ವಜನಿಕ ಸ್ಮಶಾನಕ್ಕೆ ಮಂಜೂರಾಗಿದ್ದು ಹೊರವಲಯದಲ್ಲಿದೆ. ಹೋಗಲು ದಾರಿ ಇಲ್ಲ, ಗಿಡಗಂಟಿ ಮತ್ತು ಕಲ್ಲು ಬಂಡೆಗಳಿಂದ ಆವೃತವಾಗಿದ್ದು, ಬಳಕೆಗೆ ಯೋಗ್ಯವಾಗಿಲ್ಲದ ಕಾರಣ ಯಾರು ಬಳಸುತ್ತಿಲ್ಲ. ಸ್ಮಶಾನದ ಅಭಿವೃದ್ಧಿಗೆ ₹10 ಲಕ್ಷ ಬಿಡುಗಡೆಯಾಗಿದ್ದು, ಬಳಕೆ ಮಾಡಿ ಅಭಿವೃದ್ಧಿ ಪಡಿಸಲು ಸಂಬಂಧಪಟ್ಟವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಕಲ್ಲುಬಂಡೆಗಳ ತೆರವಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ.
ಒಂದೆಡೆ ಸ್ಮಶಾನಕ್ಕೆ ನೀಡಿದ ಜಾಗವನ್ನು ಅಭಿವೃದ್ಧಿಪಡಿಸುತ್ತಿಲ್ಲ. ಮತ್ತೊಂದೆಡೆ ಪರ್ಯಾಯ ಜಾಗ ನೀಡಲು ಕ್ರಮ ಕೈಗೊಳ್ಳುತ್ತಿಲ್ಲ. ಸ್ಮಶಾನ ಸರ್ಕಾರಿ ದಾಖಲೆಗಳಿಗೆ ಸೀಮಿತವಾಗಿದೆ. ಹೋರಾಟ ಅನಿವಾರ್ಯವಾಗಿದೆ.– ಎಚ್.ಎನ್.ನಟರಾಜು, ಗ್ರಾ.ಪಂ ಸದಸ್ಯ
ಮಠಕ್ಕೆ ಸೇರಿದ ಒಂದು ಎಕರೆ ಜಮೀನಿನಲ್ಲಿ ವೀರಶೈವ ಲಿಂಗಾಯತರ ಶವಸಂಸ್ಕಾರಕ್ಕೆ ನೀಡಲಾಗಿದೆ. ಸಾರ್ವಜನಿಕ ಸ್ಮಶಾನಕ್ಕೆ ಎರಡು ಎಕರೆ ಮಂಜೂರಾಗಿದೆ. ಅಧಿಕಾರಿಗಳು ಜನಪ್ರತಿನಿಧಿಗಳು ಗಮನಹರಿಸಬೇಕಿದೆ.– ಸಿದ್ಧಗಂಗಾ ಶಿವಾನಂದ ಸ್ವಾಮೀಜಿ
ಹುಲಿಯೂರುದುರ್ಗದಲ್ಲಿ ಮುಸ್ಲಿಮರಿಗೆ ಮೂರು ಎಕರೆ ಸ್ಮಶಾನ ಭೂಮಿ ಇದೆ. ಅದರಲ್ಲಿಯೇ ಅಲ್ಪಭಾಗ ಹಿಂದೂಗಳಿಗೆ ಮಂಜೂರಾಗಿದೆ. ಬಳಕೆಗೆ ಗೊಂದಲಗಳಿರುವುದರಿಂದ ಯಾರು ಮುಂದೆ ಬರುತ್ತಿಲ್ಲ.– ಅಲ್ಲಾಬಕಷ್, ತಾ.ಪಂ. ಮಾಜಿ ಸದಸ್ಯ
ವ್ಯಾಪಾರಕ್ಕಾಗಿ ಬಂದು ದುರ್ಗದಲ್ಲಿ ನೆಲಸಿದ್ದೇವೆ. ಸಂಬಂಧಿಗಳು ಮೃತಪಟ್ಟಾಗ ಸಾರ್ವಜನಿಕ ಸ್ಮಶಾನವಿಲ್ಲದ ಕಾರಣ ಗ್ರಾಮಸ್ಥರ ಮೊರೆಹೋಗಿ ಅವರ ಜಮೀನನಲ್ಲಿ ಅಂತ್ಯಕ್ರಿಯೆ ಮಾಡಿದ್ದೇವೆ. ಸಾರ್ವಜನಿಕ ಸ್ಮಶಾನದ ಅಗತ್ಯವಿದೆ.– ಜಯರಾಮ ಶೇಠ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.