ADVERTISEMENT

ನಾನು ಜಾತಿ ದ್ವೇಷ ರಾಜಕಾರಣಿಯಲ್ಲ; ಸೊಗಡು ಶಿವಣ್ಣ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 9:59 IST
Last Updated 25 ಅಕ್ಟೋಬರ್ 2019, 9:59 IST
ಸೊಗಡು ಶಿವಣ್ಣ
ಸೊಗಡು ಶಿವಣ್ಣ   

ತುಮಕೂರು: 'ನಾನು ಜಾತಿ ಆಧರಿಸಿ ರಾಜಕಾರಣ ಮಾಡಿಲ್ಲ. ಜಾತಿ ದ್ವೇಷ ಮಾಡುವ ರಾಜಕಾರಣಿಯೂ ನಾನಲ್ಲ. ಸಿದ್ದರಾಮಯ್ಯ ಹೇಳಿಕೆ ಖಂಡಿಸಿದ್ದಕ್ಕೆ ಯೋಗ್ಯತೆ ಇಲ್ಲದ ಕೆಲ ವ್ಯಕ್ತಿಗಳು ಕುರುಬ ಸಮುದಾಯವನ್ನು ಎತ್ತಿಕಟ್ಟಿ ನನ್ನ ವಿರುದ್ಧ ಪ್ರತಿಭಟನೆ ಮಾಡಿಸಿದ್ದಾರೆ' ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದಲಿತರು, ಕುರುಬರು ಸೇರಿದಂತೆ ಎಲ್ಲ ವರ್ಗದವರ ಮನೆಯಲ್ಲಿ ತಿಂದುಂಡಿದ್ದೇನೆ. ನನಗೆ ಜಾತಿ ಎಂಬುದೇ ಗೊತ್ತಿಲ್ಲ. ಎಲ್ಲರೊಂದಿಗೆ ಬೆರೆತು ಬೆಳೆದ ನಾನು ಜಾತಿಗಳ ದ್ವೇಷಿಯಲ್ಲ' ಎಂದು ಹೇಳಿದರು.

’ಸಾವರ್ಕರ್ ಅವರಿಗೆ ಭಾರತ ರತ್ನ ಕೊಡುವುದಕ್ಕೆ ಸಿದ್ದರಾಮಯ್ಯ ವಿರೋಧಿಸಿ ಹೇಳಿಕೆ ನೀಡಿದ್ದರು. ಅದನ್ನು ನಾನು ಕಟುವಾಗಿ ಖಂಡಿಸಿದ್ದೆ. ಸಿದ್ದರಾಮಯ್ಯ ಧೋರಣೆ ಖಂಡಿಸಿದ್ದಕ್ಕೆ ಕುರುಬ ಸಮುದಾಯ ಎತ್ತಿಕಟ್ಟಿ ಪ್ರತಿಭಟನೆ ಮಾಡಿಸಲಾಗಿದೆ’ ಎಂದು ಆರೋಪಿಸಿದರು.

ADVERTISEMENT

’ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಹಿಂದೆ ನರಹಂತಕ ಎಂದು ಟೀಕಿಸಿದ್ದರು. ಬುಧವಾರ ಬಾದಾಮಿಯಲ್ಲಿ ವಿಧಾನಸಭಾ ಸ್ಪೀಕರ್ ಅವರಿಗೆ ಏಕ ವಚನದಲ್ಲಿ ಬಾಯಿಗೆ ಬಂದಂತೆ ಸಿದ್ದರಾಮಯ್ಯ ಮಾತನಾಡಿದ್ದಾರೆ. ಹಿರಿಯ ರಾಜಕಾರಣಿಯಾಗಿ, ಮಾಜಿ ಮುಖ್ಯಮಂತ್ರಿಯಾಗಿರುವ ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಅರಿವಿಲ್ಲವೇ. ಅವರು ಏನೇ ಮಾತನಾಡಿದರೂ ಸಹಿಸಿಕೊಂಡು ಸುಮ್ಮನಿರಬೇಕೆ’ ಎಂದು ಪ್ರಶ್ನಿಸಿದರು.

’ಕುರುಬ ಸಮುದಾಯದ ಬಗ್ಗೆ ನನಗೆ ಅಪಾರ ಗೌರವವಿದೆ. ಆ ಸಮುದಾಯದ ಅನೇಕ ಮುಖಂಡರು, ಆಪ್ತರು ನನ್ನೊಂದಿಗೆ ಇದ್ದಾರೆ. ಅವರನ್ನು ಯಾವತ್ತೂ ಜಾತಿ ಕಾರಣಕ್ಕೆ ರಾಜಕೀಯಕ್ಕೆ ಬಳಸಿಕೊಂಡಿಲ್ಲ. ಕುರುಬ ಸಮುದಾಯದ ಮೇಲಿನ ಅಭಿಮಾನದಿಂದಲೇ ಶಿರಾ ಗೇಟ್‌ನಲ್ಲಿ ಕನಕ ವೃತ್ತ ಮಾಡಿ ಪುತ್ಥಳಿ ಸ್ಥಾಪನೆ ಮಾಡಿದೆ. ಸಮುದಾಯದವರಿಗೆ ಈ ವಿಷಯ ಗೊತ್ತಿದೆ’ ಎಂದು ಹೇಳಿದರು.

‘ಆದರೆ, ಪ್ರಜಾಪ್ರಗತಿ ನಾಗಣ್ಣ ಸೇರಿದಂತೆ ಕೆಲವರು ಸಮುದಾಯವನ್ನು ಎತ್ತಿಕಟ್ಟಿದ್ದಾರೆ. ನಾನು ನೀಡಿದ ಹೇಳಿಕೆಗೆ ಜಾತಿ ಬಣ್ಣ ಹಚ್ಚಿದ್ದಾರೆ. ಅವರು ನಡೆಸಿದ ಪ್ರತಿಭಟನೆಯಲ್ಲಿ ಸಜ್ಜನರು ಭಾಗವಹಿಸಿಲ್ಲ’ ಎಂದು ಹೇಳಿದರು.

ಜಯಸಿಂಹ, ಕೆ.ಪಿ.ಮಹೇಶ್, ಬಸವರಾಜ್, ಬನಶಂಕರಿ ಬಾಬು, ಕುಮಾರಸ್ವಾಮಿ, ರಂಗನಾಯಕ್, ಗೋಪಾಲಕೃಷ್ಣ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.