ADVERTISEMENT

ತುಮಕೂರು | ‘ಹಸಿರು ಗ್ರಾಮ’ ಯೋಜನೆ ಜಾರಿ

ಜಿಲ್ಲೆಯಲ್ಲಿ 5 ಲಕ್ಷ ಗಿಡ ನೆಡುವ ಗುರಿ, ಪ್ರತಿ ಗ್ರಾ.ಪಂ ವ್ಯಾಪ್ತಿ 1 ಸಾವಿರ ಗಿಡ

​ಪ್ರಜಾವಾಣಿ ವಾರ್ತೆ
Published 14 ಮೇ 2024, 15:51 IST
Last Updated 14 ಮೇ 2024, 15:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಜಿಲ್ಲೆಯ ಹಸಿರೀಕರಣಕ್ಕೆ ಜಿಲ್ಲಾ ಪಂಚಾಯಿತಿಯಿಂದ ‘ಹಸಿರು ಗ್ರಾಮ’ ಯೋಜನೆ ರೂಪಿಸಿದ್ದು, ಜೂನ್‌ 5ರಂದು ಪರಿಸರ ದಿನದ ಅಂಗವಾಗಿ 5 ಲಕ್ಷ ಗಿಡ ನೆಡುವ ಗುರಿ ಹೊಂದಲಾಗಿದೆ.

‘ಜಿಲ್ಲೆಯಲ್ಲಿ ಈಗಾಗಲೇ ಮಳೆ ಪ್ರಾರಂಭವಾಗಿದ್ದು, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1 ಸಾವಿರ ಗಿಡ ನೆಡುವ ಮೂಲಕ ಹಸಿರೀಕರಣಕ್ಕೆ ಆದ್ಯತೆ ನೀಡಬೇಕು. ಪರಿಸರ ಸಂರಕ್ಷಣೆ ಮುಂದಾಗಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳ ಮಾರ್ಗಸೂಚಿ ಸಭೆಯಲ್ಲಿ ಮಾತನಾಡಿದರು.

ADVERTISEMENT

ನರೇಗಾ ಒಳಗೊಂಡಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಇಮ್ಮಡಿಯಾಗುವಂತೆ ಶ್ರಮಿಸಬೇಕು. ನರೇಗಾ ಯೋಜನೆಯ ಪರಿಣಾಮಕಾರಿ ಅನುಷ್ಠಾನದಿಂದ ಜಿಲ್ಲೆಯು ರಾಜ್ಯದ ಗಮನ ಸೆಳೆದಿದೆ. ಈಗಾಗಲೇ 70 ಸಾವಿರ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ₹461 ಕೋಟಿ ಅನುದಾನದ ಕಾಮಗಾರಿಗಳು ನಡೆಯುತ್ತಿವೆ ಎಂದರು.

ಜೂನ್‌ 2ನೇ ವಾರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತದೆ. ನರೇಗಾ ಯೋಜನೆಯ ಮಿಷನ್ 500 ಅಭಿಯಾನ ಹೀಗೆ ಮುಂದುವರಿಯಲಿದೆ. ಜಿಲ್ಲೆಯಲ್ಲಿ ಈಗಾಗಲೇ 1 ಸಾವಿರ ಶಾಲಾಭಿವೃದ್ಧಿ ಕಾಮಗಾರಿಗಳು ಆರಂಭವಾಗಿವೆ. 3 ಲಕ್ಷ ಮೀಟರ್‌ ಚರಂಡಿ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಎಲ್ಲ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.

ಜಿ.ಪಂ ಉಪಕಾರ್ಯದರ್ಶಿ ಹಾಲಸಿದ್ಧಪ್ಪ ಪೂಜೇರಿ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ರವೀಶ್‌, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಬಿ.ಸಿ.ಶಾರದಮ್ಮ, ರೇಷ್ಮೆ ಇಲಾಖೆ ಉಪನಿರ್ದೇಶಕ ಬಾಲಕೃಷ್ಣ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.