ADVERTISEMENT

ಪೌಷ್ಟಿಕ ಆಹಾರ ಅಸಮರ್ಪಕ ವಿತರಣೆ: ಅಂಗನವಾಡಿಗೆ ಗ್ರಾಮಸ್ಥರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 27 ಮೇ 2025, 15:01 IST
Last Updated 27 ಮೇ 2025, 15:01 IST
ತಿಪಟೂರು ತಾಲ್ಲೂಕಿನ ಮತ್ತಿಹಳ್ಳಿ ಪಂಚಾಯಿತಿಯ ಮಡೇನೂರು ಬೋವಿ ಕಾಲೊನಿ ಅಂಗನವಾಡಿಗೆ ಮುತ್ತಿಗೆಹಾಕಿದ ಗ್ರಾಮಸ್ಥರು
ತಿಪಟೂರು ತಾಲ್ಲೂಕಿನ ಮತ್ತಿಹಳ್ಳಿ ಪಂಚಾಯಿತಿಯ ಮಡೇನೂರು ಬೋವಿ ಕಾಲೊನಿ ಅಂಗನವಾಡಿಗೆ ಮುತ್ತಿಗೆಹಾಕಿದ ಗ್ರಾಮಸ್ಥರು   

ತಿಪಟೂರು: ತಾಲ್ಲೂಕಿನ ಮತ್ತಿಹಳ್ಳಿ ಪಂಚಾಯಿತಿಯ ಮಡೇನೂರು ಬೋವಿ ಕಾಲೊನಿಯಲ್ಲಿ ಬಾಣಂತಿಯರು ಹಾಗೂ ಮಕ್ಕಳಿಗೆ ಸರ್ಕಾರದಿಂದ ನೀಡುತ್ತಿರುವ ಪೌಷ್ಟಿಕ ಆಹಾರವನ್ನು ಸರಿಯಾಗಿ ವಿತರಿಸದೆ ದುರ್ಬಳಕೆ ಮಡಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಮಂಗಳವಾರ ಅಂಗನವಾಡಿ ಕೇಂದ್ರಕ್ಕೆ ಮುತ್ತಿಗೆ ಹಾಕಿದರು.

ಅಂಗನವಾಡಿ ಕಾರ್ಯಕರ್ತೆ ಬಾಣಂತಿ ಬಿಂದು ಅವರಿಗೆ ಒಂದೇ ದಿನ 150 ಮೊಟ್ಟೆಗಳನ್ನು ವಿತರಣೆ ಮಾಡಿದ್ದರು. ಇದನ್ನು ಪ್ರಶ್ನಿಸಿದಾಗ ಕಾರ್ಯಕರ್ತೆ ಅಸಡ್ಡೆ ಹಾಗೂ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಹಣಕ್ಕಾಗಿ ದಿನಸಿ ಪದಾರ್ಥ, ಮೊಟ್ಟೆ ಹಾಗೂ ಇತರೆ ಸಾಮಗ್ರಿ ಮಾರಾಟ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದರು.

ಅಂಗನವಾಡಿಯಲ್ಲಿನ ದಾಸ್ತಾನು ಹಾಗೂ ಬಾಣಂತಿಯರ, ಮಕ್ಕಳ ಹಾಜರಾತಿಯಲ್ಲಿ ಪುಸ್ತಕಕ್ಕೂ ಹಾಗೂ ಪ್ರಸ್ತುತ ಹಾಜರಾತಿಗೂ ಹೊಂದಾಣಿಕೆ ಇಲ್ಲದಂತಾಗಿದೆ. ಹಲವು ಬಾರಿ ತಿಳುವಳಿಕೆ ನೀಡಿದರೂ ತಿದ್ದಿಕೊಂಡಿಲ್ಲ. ಪದೇ ಪದೇ ಇಂತಹ ಘಟನೆ ಮರುಕಳಿಸುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದರು.

ADVERTISEMENT

ಸ್ಥಳಕ್ಕೆ ಭೇಟಿ ನೀಡಿದ ಶಿಶು ಅಭಿವೃದ್ಧಿ ಅಧಿಕಾರಿ ದೀಪಾ ಹೆಬ್ಬಳಿ, ಒಂದೇ ಬಾರಿಗೆ ಬಾಣಂತಿಯರಿಗೆ ಮೊಟ್ಟೆಗಳನ್ನು ನೀಡುವುದರ ಹಾಗೂ ಅಂಗನವಾಡಿ ಕೇಂದ್ರದ ಪದಾರ್ಥಗಳನ್ನು ಮಾರಾಟ ಮಾಡಲು ಯತ್ನಿಸಿರುವ ಬಗ್ಗೆ ವಿವರ ಪಡೆದು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಕೇಂದ್ರದ ಸುತ್ತಮುತ್ತ ಸ್ವಚ್ಛತೆ ಇಲ್ಲದಿರುವ ಬಗ್ಗೆ ಈಗಾಗಲೇ ಪಿಡಿಒ ಗಮನಕ್ಕೆ ತರಲಾಗಿದೆ ಎಂದರು.

ಗ್ರಾಮಸ್ಥರಾದ ತೀರ್ಥಕುಮಾರ್, ಸೋಮಶೇಖರ್. ಶ್ರೀನಿವಾಸ್, ಗುರುಮೂರ್ತಿ ಹಾಗೂ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.