
ಹುಳಿಯಾರು: ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿದ್ದು, ಬಡವರಿಗಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಅದ ಮೇಲೆ ಬಡವರ ಪರ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯಾದ ಮೇಲೆ ಒಮ್ಮೆ ಮಾತನಾಡುವಾಗ ತಾವು ಚಿಕ್ಕವರಾಗಿದ್ದಾಗ ಕಾಯಿಲೆ ಆದಾಗ ಮಾತ್ರ ಬೇರೆಯವರ ಮನೆಯಿಂದ ಅಕ್ಕಿ ಪಡೆದು ಅನ್ನ ಮಾಡಿ ನೀಡುತ್ತಿದ್ದರು ಎಂಬ ಮಾತನ್ನು ಹೇಳಿದ್ದರು. ಆದರೆ ಇಂದು ಯಾರೂ ಅಂತಹ ಸ್ಥಿತಿ ಅನುಭವಿಸಬಾರದು ಎಂದು ಬಡವರಿಗೆ ಅಕ್ಕಿ ಕೊಡುವ ಯೋಜನೆ ಜಾರಿಗೆ ತರೋಣ ಎಂದಿದ್ದರು ಎಂದು ಸ್ಮರಿಸಿದರು.
ಇಂದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ₹1,200 ಕೋಟಿ ಬಿಡುಗಡೆ ಆಗಿದೆ. ಇಷ್ಟು ಹಣ ರಾಜ್ಯದ ಯಾವ ಕ್ಷೇತ್ರದಲ್ಲೂ ಕಾಣಲು ಆಗಿಲ್ಲ. ಗಣಿಗಾರಿಕೆಯಿಂದ ಸರ್ಕಾರ ವಸೂಲಿ ಮಾಡಿದ ಸೆಸ್ ಹಣವನ್ನು ಸದ್ವಿನಿಯೋಗ ಪಡಿಸಲಾಗುತ್ತಿದೆ ಎಂದರು.
ಶಾಸಕ ಸಿ.ಬಿ. ಸುರೇಶ್ ಬಾಬು, ಕಾಂಗ್ರೆಸ್ ಮುಖಂಡರಾದ ಕೆ.ಎಸ್ .ಕಿರಣ್ ಕುಮಾರ್, ಮುರಳೀಧರ ಹಾಲಪ್ಪ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪಂಚಾಯಿತಿ ಸಿಇಒ ಸಿ.ಎನ್.ಪ್ರಭು, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರಶೇಖರ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಟಿ.ಚಿಕ್ಕಣ್ಣ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.