ADVERTISEMENT

ತಿಪಟೂರು: ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಿಸಿ

ಕ್ವಿಂಟಾಲ್‍ಗೆ ₹11,000

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2021, 2:45 IST
Last Updated 26 ಡಿಸೆಂಬರ್ 2021, 2:45 IST
ಯೋಗಾನಂದ ಸ್ವಾಮಿ
ಯೋಗಾನಂದ ಸ್ವಾಮಿ   

ತಿಪಟೂರು: ಕೇಂದ್ರ ಸರ್ಕಾರ ಉಂಡೆ ಕೊಬ್ಬರಿಗೆ ಪ್ರತಿ ಕ್ವಿಂಟಲ್‌ಗೆ ₹11 ಸಾವಿರ ಬೆಂಬಲ ಬೆಲೆ ಘೋಷಿಸಿದ್ದು, ಇದಕ್ಕೆ ಕೊಬ್ಬರಿ ಬೆಳೆಗಾರರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಹಲವು ವರ್ಷದಿಂದ ಪ್ರತಿ ಕ್ವಿಂಟಲ್‌ಗೆ ₹15 ಸಾವಿರ ಬೆಂಬಲ ಬೆಲೆ ಘೋಷಿಸಬೇಕೆಂಬ ಬೆಳೆಗಾರರ ಬೇಡಿಕೆ ಈಡೇರಿಲ್ಲ. ಇದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ಏಷ್ಯಾದಲ್ಲಿಯೇ ಅತೀ ದೊಡ್ಡದಾದ ಕೊಬ್ಬರಿ ಮಾರುಕಟ್ಟೆಯನ್ನು ಹೊಂದಿರುವ ತಿಪಟೂರು ಕೊಬ್ಬರಿ ಬೆಲೆ ಬಹಳ ದಿನಗಳಿಂದ ಬೆಲೆಯಲ್ಲಿ ಸ್ಥಿರತೆ ಸಾಧಿಸಿ ಸುಮಾರು 10 ತಿಂಗಳಿಂದ ₹16-17 ಸಾವಿರದ ಆಸುಪಾಸಿನಲ್ಲಿತ್ತು. ಅದಕ್ಕಾಗಿ ರೈತರು ಬೆಂಬಲ ಬೆಲೆಯನ್ನು ಏರಿಕೆ ಮಾಡುವಂತೆ ಹಲವು ದಿನಗಳಿಂದಲೂಬೇಡಿಕೆ ಇತ್ತು.

ADVERTISEMENT

2020ರ ಮಾರ್ಚ್ 13ರಂದು ರೈತರ ಸಂಕಷ್ಟವನ್ನು ಗಣನೆಗೆ ತೆಗೆದುಕೊಂಡು ₹9,960 ಇದ್ದ ಉಂಡೆ ಕೊಬ್ಬರಿಯ ಬೆಂಬಲ ಬೆಲೆಯನ್ನು ₹10,300ಕ್ಕೆಗೆ ಏರಿಕೆ ಮಾಡಿದ್ದರು. ಇದೀಗ ₹11 ಸಾವಿರಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿರುವುದು ಬೇಡಿಕೆಗೆ ತುಸು ಮನ್ನಣೆ ದೊರೆತಂತಾಗಿದೆ.

ತಿಪಟೂರು ಕೊಬ್ಬರಿಗೆ ದೇಶದಾದ್ಯಂತ ಅತೀ ಹೆಚ್ಚಿನ ಬೇಡಿಕೆ ಇದೆ. ಆದರೆ ಅನೇಕ ಕಾರಣಗಳಿಂದ ಬೇಸಿಗೆ ಪ್ರಾರಂಭದಲ್ಲಿಯೇ ಕೊಬ್ಬರಿ ಬೆಲೆಯು ಗಣನೀಯವಾಗಿ ಕಡಿಮೆಯಾಗುತ್ತಾ ಬರುವುದು ಸಾಮಾನ್ಯ. ಮುಂದಿನ ದಿನಗಳಲ್ಲಿ ಇನ್ನೂ ಕಡಿಮೆ ಬೆಲೆಗೆ ತಲುಪದಂತೆ ಆಗಲು ಬೆಂಬಲ ಬೆಲೆಯೂ ಸಹಕಾರಿಯಾಗಲಿದೆ.

ತಿಪಟೂರು ಕೊಬ್ಬರಿ ಬೆಲೆಯೂ ₹18 ಸಾವಿರದ ಅಸುಪಾಸಿನಲ್ಲಿದ್ದು, ಅದರ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಗೆ ಮಾರಾಟವಾಗುತ್ತಿದೆ. ಕೆಲ ತಜ್ಞರ ಪ್ರಕಾರ ಕೊಬ್ಬರಿ ಕ್ವಿಂಟಲ್‍ಗೆ ₹20 ಸಾವಿರ ದೊರೆತರೆ ಮಾತ್ರವೇ ರೈತರಿಗೆ ಅಸಲು ದೊರೆಯುತ್ತದೆ. ಕನಿಷ್ಠ ₹15 ಸಾವಿರ ಬೆಂಬಲ ಬೆಲೆ ಘೋಷಿಸುವಂತೆ ರೈತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.