ADVERTISEMENT

ಗ್ರಾಮ ಪಂಚಾಯಿತಿ: ಅಧಿಕಾರಕ್ಕೆ ಹೆಚ್ಚುತ್ತಿದೆ ಗುಂಪುಗಾರಿಕೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 5:33 IST
Last Updated 6 ಜನವರಿ 2021, 5:33 IST

ಗುಬ್ಬಿ: ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ ಚುನಾಯಿತರಾದ ಸದಸ್ಯರು ಅಧ್ಯಕ್ಷಗಾದಿಯ ಮೇಲೆ ಕಣ್ಣೀಟ್ಟಿದ್ದರೆ, ಮುಖಂಡರು ಗ್ರಾಮ ಪಂಚಾಯಿತಿ ಅಧಿಕಾರ ಹಿಡಿಯಲು ಸಿದ್ಧತೆ ನಡೆಸುತ್ತಿದ್ದಾರೆ.

ತಾಲ್ಲೂಕಿನಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಅವರಿಗೆ ಅನುಕೂಲಕರವಾಗಿರುವ ಅಭ್ಯರ್ಥಿಗಳನ್ನು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಗುಂಪುಗಾರಿಕೆ ಹೆಚ್ಚಾಗುತ್ತಿದೆ. ಶಾಸಕ ಎಸ್.ಆರ್. ಶ್ರೀನಿವಾಸ್ ಅವರು ಶತಾಯಗತಾಯ ಅವರ ಆಪ್ತವಲಯದವರನ್ನು ಅಧ್ಯಕ್ಷ ಗಾದಿಗೆ ತರಲು ಯತ್ನಿಸುತ್ತಿದ್ದಾರೆ.

ಬಿಜೆಪಿಯಲ್ಲಿ ಸಂಸದ ಮತ್ತು ಎಸ್.ಡಿ. ದಿಲೀಪ್ ಕುಮಾರ್ ಅವರದೇ ಬಣಗಳನ್ನು ಮಾಡಿಕೊಂಡು ತಮ್ಮ ಹಿಂಬಾಲಕರನ್ನು ಅಧಿಕಾರಕ್ಕೆತರಲು ಹೋರಾಟಮಾಡುತ್ತಿದ್ದಾರೆ.

ADVERTISEMENT

ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಸಮಬಲದಲ್ಲಿರುವ ಕಡೆ ಸಮಾನ ಮನಸ್ಸಿನ ಸದಸ್ಯರು ಒಟ್ಟಿಗೆ ಸೇರಿ ಅಧಿಕಾರ ಹಿಡಿಯುವ ಬಗ್ಗೆ ಲೆಕ್ಕಚಾರ ಹಾಕುತ್ತಿದ್ದಾರೆ. ಕೆಲವು ಕಡೆ ಪಕ್ಷದ ಮುಖಂಡರನ್ನೇ ಬದಿಗೊತ್ತಿ ಆಯ್ಕೆಯಾಗಿರುವ ಸದಸ್ಯರು ಒಂದೆಡೆ ಸೇರಿ ಅಧಿಕಾರ ಹಿಡಿಯುವ ಬಗ್ಗೆ ಚರ್ಚಿಸುತ್ತಿದ್ದಾರೆ. ಹಲವು ಗ್ರಾಮಗಳಲ್ಲಿ ದೇವಸ್ಥಾನಗಳ ಬಳಿ ಕುಳಿತು ಚರ್ಚಿಸಿ ಆಣೆ ಪ್ರಮಾಣಗಳನ್ನು ಮಾಡಿಕೊಂಡು ತಮ್ಮದೇ ಆದ ಗುಂಪು ರಚಿಸಿಕೊಳ್ಳುತ್ತಿದ್ದಾರೆ. ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಎಲ್ಲ ಸದಸ್ಯರು ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಕಿತ್ತಾಟಕ್ಕಿಂತ ಗ್ರಾಮಗಳ ಅಭಿವೃದ್ಧಿಯೇ ಮುಖ್ಯವಾಗಿದೆ ಎಂದು ನೂತನವಾಗಿ ಆಯ್ಕೆ ಆಗಿರುವ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಹೇಳಿದರು.

ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷರಹಿತ ಆಗಿರುವುದರಿಂದ ಒಮ್ಮತ ಇರುವ ಸದಸ್ಯರು ಸೇರಿಕೊಂಡು ಅಧಿಕಾರವನ್ನು ಹಿಡಿಯುವ ತವಕದಲ್ಲಿ ಇರುವುದು ತಾಲ್ಲೂಕಿನಲ್ಲಿ ಕಂಡುಬರುತ್ತಿದೆ. ತಮ್ಮ ಪಕ್ಷದ ಸದಸ್ಯರುಗಳೇ ಅಧಿಕಾರವನ್ನು ಹಿಡಿಯಬೇಕು ಎನ್ನುವ ನಿಟ್ಟಿನಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಮಾಡಿಸಿಕೊಳ್ಳಲು ಮುಖಂಡರು ಪ್ರಯತ್ನಿಸುತ್ತಿರುವ ಸೂಚನೆಗಳು ಕಾಣುತ್ತಿವೆ. ಈ ನಿಟ್ಟಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಈಗಾಗಲೇ ಕಾರ್ಯೋನ್ಮುಖ ರಾಗಿರುವುದು ಕಂಡುಬರುತ್ತಿದೆ. ಕೆಲವು ಸದಸ್ಯರು ಹಣ ಬಲದಿಂದ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನ ಪಡೆಯಲು ಹವಣಿಸುತ್ತಿದ್ದಾರೆ. ಮತ್ತೆ ಕೆಲವರು ಸಮುದಾಯದ
ಪ್ರಭಾವ ಬೀರಿ ಅಧಿಕಾರವನ್ನು ಪಡೆಯಲು ಯೋಜನೆರೂಪಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.