ADVERTISEMENT

ಕತೆ, ಕಥನಗಳ ವಿಶ್ವಕ್ಕೆ ಪರಿಚಯಿಸಿದ್ದು ಭಾರತ

ಸಾಹಿತಿ ಚಂದ್ರಶೇಖರ ಕಂಬಾರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 3:58 IST
Last Updated 12 ಜುಲೈ 2025, 3:58 IST
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಕುಣಿಗಲ್ ಜ್ಞಾನಭಾರತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಕುಣಿಗಲ್ ಜ್ಞಾನಭಾರತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು   

ಕುಣಿಗಲ್: ಕತೆ ಮತ್ತು ಕಥನಗಳನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ತಿಳಿಸಿದರು.

ತಾಲ್ಲೂಕು ಒಕ್ಕಲಿಗರ ಸಂಘದಿಂದ ನಡೆಯುತ್ತಿರುವ ಪಟ್ಟಣದ ಜ್ಞಾನಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನಪದ ಕಲೆಗಳ ಗತ್ತು ಕನ್ನಡಿಗರಿಗೆ ಮಾತ್ರ ಗೊತ್ತು. ಕನ್ನಡದ ಕತೆಗಳನ್ನು ಕೇಳುವುದರಿಂದ, ಹೇಳುವುದರಿಂದ ಜ್ಞಾಪಕ ಶಕ್ತಿ, ಆತ್ಮಶಕ್ತಿ, ಆತ್ಮಸ್ಥೈರ್ಯ, ವಿಶ್ವಾಸ ಹೆಚ್ಚಾಗುತ್ತದೆ. ಜನಪದ ಕಲೆಗಳ ಮೂಲ ಭಾರತ ಎಂದರು.

ADVERTISEMENT

‘ಎಲ್ಲರ ಜೀವನದಲ್ಲಿ ಬಾಲ್ಯವೇ ಪ್ರಮುಖ ಘಟ್ಟವಾಗಿದ್ದು, ಬಾಲ್ಯದ ಮಹತ್ವ ಬಾಲ್ಯ ಕಳೆದ ಮೇಲೆ ತಿಳಿಯುತ್ತದೆ. ಯಾವುದೇ ಕಪಟವಿಲ್ಲದ ಮುಗ್ಧ ಮನಸಿನ ಮಕ್ಕಳೊಂದಿಗೆ ಬೆರೆಯುವುದು, ಅವರಿಗೆ ಪಾಠ ಮಾಡುವುದು ಇಷ್ಟ. ಸಾಹಿತ್ಯ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ರಾಜಕೀಯ ಬೆರೆತಿದೆ. ಆದರೆ ಮಕ್ಕಳಲ್ಲಿ ಮಾತ್ರ ಇನ್ನೂ ರಾಜಕೀಯ ಬೆರತಿಲ್ಲ. ಆದ್ದರಿಂದ ಎಲ್ಲೇ ಹೋದರು ಮಕ್ಕಳೊಂದಿಗೆ ಬೆರೆಯುಲು ಮನಸು ಹಾತೊರೆಯುತ್ತದೆ’ ಎಂದರು.

ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಾಲಗುರುಮೂರ್ತಿ, ಯುವಶಕ್ತಿ ದುಶ್ಚಟಕ್ಕೆ, ದುಷ್ಟರ ಸಹವಾಸಕ್ಕೆ ಬೀಳದೆ, ಗುರು ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರೆದು ಸಾಧನೆ ಮಾಡಲು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಸತ್ಕರಿಸಲಾಯಿತು.

ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಬಿ.ರಾಮಸ್ವಾಮಿ ಗೌಡ, ಜ್ಞಾನಭಾರತಿ ವಿದ್ಯಾಸಂಸ್ಥೆ ತಾಲ್ಲೂಕಿನ ಶೈಕ್ಷಣಿಕ ಪ್ರಗತಿಗೆ ತನ್ನದೇ ಆದ ಕಾಣಿಕೆ ನೀಡಿದೆ. ಗುಣಮಟ್ಟದ ಮತ್ತು ಸಂಸ್ಕಾರಯುಕ್ತ ಶಿಕ್ಷಣಕ್ಕೆ ಆದ್ಯತೆ ನೀಡಿದ ಫಲವಾಗಿ ಹೆಮ್ಮರವಾಗಿ ಬೆಳೆದಿದೆ ಎಂದರು.

ಆಡಳಿತ ಮಂಡಳಿ ಪದಾಧಿಕಾರಿಗಳು, ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ನೀಲಕಂಠೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಬೋರೆಗೌಡ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಪ್ರಾಂಶುಪಾಲ ಗೋವಿಂದೇಗೌಡ, ಉಪಪ್ರಾಂಶುಪಾಲ ಕಪನಿಪಾಳ್ಯ ರಮೇಶ್, ಮುಖ್ಯ ಶಿಕ್ಷಕ ಕೆ.ಜಿ.ಪ್ರಕಾಶ್ ಮೂರ್ತಿ, ಗಂಗಮ್ಮ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.