ADVERTISEMENT

ಭಾರತೀಯ ತಂತ್ರಜ್ಞಾನ ಆಳ ಅಧ್ಯಯನ ಅವಶ್ಯ: ಸಂಶೋಧಕ ಪ್ರೊ.ಎಂ.ಎ.ಲಕ್ಷ್ಮಿತಾತಾಚಾರ್

ಎಂಜಿನಿಯರ್ಸ್ ಅಸೋಸಿಯೇಷನ್ ಆಯೋಜಿಸಿದ್ಧ ಎಂಜಿನಿಯರ್ಸ್ ದಿನಾಚರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 16:19 IST
Last Updated 30 ಸೆಪ್ಟೆಂಬರ್ 2019, 16:19 IST
ಸಂಸ್ಕೃತ ವಿದ್ವಾಂಸ ಪ್ರೊ.ಎಂ.ಎ.ಲಕ್ಷ್ಮಿತಾತಾಚಾರ್ ಅವರನ್ನು ಎಂಜಿನಿಯರ್ಸ್ ಅಸೋಸಿಯೇಷನ್‌ವತಿಯಿಂದ ಸನ್ಮಾನಿಸಲಾಯಿತು
ಸಂಸ್ಕೃತ ವಿದ್ವಾಂಸ ಪ್ರೊ.ಎಂ.ಎ.ಲಕ್ಷ್ಮಿತಾತಾಚಾರ್ ಅವರನ್ನು ಎಂಜಿನಿಯರ್ಸ್ ಅಸೋಸಿಯೇಷನ್‌ವತಿಯಿಂದ ಸನ್ಮಾನಿಸಲಾಯಿತು   

ತುಮಕೂರು: ಪ್ರಾಚೀನ ಭಾರತದ ಸಂಶೋಧನೆಗಳ ಬಗ್ಗೆ ಈಗಿನ ತಂತ್ರಜ್ಞರು ಅರಿಯಬೇಕು. ಸಂಸ್ಕೃತದಲ್ಲಿ 8500ಕ್ಕೂ ಹೆಚ್ಚು ಹಸ್ತಪ್ರತಿ ವಿಜ್ಞಾನಕ್ಕೆ ಸಂಬಂಧಿಸಿವೆ ಎಂದು ಗುರುತಿಸಲಾಗಿದೆ. ನಮ್ಮ ತಂತ್ರಜ್ಞರು ಈ ಬಗ್ಗೆ ಹೆಚ್ಚು ಅಧ್ಯಯನ ಮಾಡಬೇಕು ಎಂದು ಮೇಲುಕೋಟೆಯ ಸಂಸ್ಕೃತ ವಿದ್ವಾಂಸ ಹಾಗೂ ಸಂಶೋಧಕ ಪ್ರೊ.ಎಂ.ಎ.ಲಕ್ಷ್ಮಿತಾತಾಚಾರ್ ಹೇಳಿದರು.

ಸೋಮವಾರ ಸಂಜೆ ನಗರದ ಎಸ್‌ಎಸ್‌ಐಟಿ ಕಾಲೇಜಿನಲ್ಲಿ ಎಂಜಿನಿಯರ್ಸ್ ಅಸೋಸಿಯೇಷನ್ ಆಯೋಜಿಸಿದ್ಧ ಎಂಜಿನಿಯರ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

’ಸಂಸ್ಕೃತ ಅಧ್ಯಯನದಿಂದ ಜ್ಞಾನ ದೊರೆಯುತ್ತದೆ. ಯಾವುದೇ ವಿಷಯದ ಬಗ್ಗೆಯೂ ಸಂಸ್ಕೃತದಲ್ಲಿ ಕಲಿಯುವ ಅವಕಾಶವಿದೆ. ನಮ್ಮ ಹಿಂದಿನ ವಿದ್ವಾಂಸರು ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆಯೂ ಬರೆದಿದ್ದಾರೆ’ ಎಂದರು.

ADVERTISEMENT

’ಭಾರತೀಯ ತಂತ್ರಜ್ಞಾನ ಸರಳ ಮತ್ತು ನಿಸರ್ಗಕ್ಕೆ ಪೂರಕ ಪದ್ಧತಿ ಅಳವಡಿಸಿಕೊಂಡಿದೆ. ಐದು ಸಾವಿರ ವರ್ಷಗಳ ಹಿಂದಿನಿಂದಲೂ ಬೆಳೆದ ಬಂದು ನಮ್ಮ ದೇಶದ ತಾಂತ್ರಿಕತೆಯನ್ನು ತಿಳಿಯುವುದು ಅವಶ್ಯವಾಗಿದೆ’ ಎಂದು ತಿಳಿಸಿದರು.

’ಬಹುಜನ ಹಿತಾಯ, ಬಹುಜನ ಸುಖಾಯ ಎಂದು ಬಲ್ಲವರಾಗಿದ್ದ ವಿಶ್ವೇಶ್ವರಯ್ಯ ಅವರು ಜನರಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ನದಿಗೆ ಅಣೆಕಟ್ಟೆ ಕಟ್ಟಿದರೆ ನದಿ ಸಾಯುತ್ತದೆ ಎಂದು ವೇದಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ, ವಿಶ್ವೇಶ್ವರಯ್ಯ ಅವರು ನದಿಗೆ ಪೂರಕ, ನಿಸರ್ಗಕ್ಕೆ ಪೂರಕ ಕ್ರಮಗಳನ್ನು ಅನುಸರಿಸಿ ತಮಿಳು ನಾಡಿನ ತಲ್ಲಣಿಯಲ್ಲಿ ಅಣೆಕಟ್ಟೆ ನಿರ್ಮಾಣ ಮಾಡಿದ್ದಾರೆ’ ಎಂದು ವಿವರಿಸಿದರು.

ಬೆಂಗಳೂರು ಏರೊಸ್ಪೇಸ್ ಕನ್ಸಲ್ಟೆಂಟ್ಸ್‌ನ ಅಧ್ಯಕ್ಷ ಎ.ಕೆ.ಸಕ್ಸೆನಾ ಮಾತನಾಡಿ, ’ನೀರಾವರಿ ವಿಚಾರದಲ್ಲಿ ವಿಶ್ವೇಶ್ವರಯ್ಯ ಅವರಿಗೆ ಅಪಾರ ಜ್ಞಾನವಿತ್ತು. ಪರಿಸರಕ್ಕೆ ಹಾನಿ ಮಾಡದೇ ಅಣೆಕಟ್ಟು ನಿರ್ಮಿಸಿದರು. ಡೆಕ್ಕನ್ ಪ್ರಾಂತ್ಯ ವನ್ನು ವ್ಯವಸಾಯಕ್ಕೆ ಯೋಗ್ಯವಾಗಿಸಿದರು. ಹೈದರಾಬಾದ್‌ ನಗರಕ್ಕೆ ನೆರೆ ತಡೆ ತಂತ್ರಜ್ಞಾನವನ್ನು ಅಳವಡಿಸಿದರು. ಅವರಿಂದಲೇ ಹೈದರಾಬಾದ್ ಇಂದು ಉಳಿದಿದೆ’ ಎಂದರು.

ಅಧ್ಯಕ್ಷತೆವಹಿಸಿದ್ದ ತುಮಕೂರು ಎಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಎನ್.ವಿ.ರಾಮಮೂರ್ತಿ ಮಾತನಾಡಿ, ‘ಸ್ಮಾರ್ಟ್‌ಸಿಟಿ ತುಮಕೂರು ನಿರ್ಮಾಣಕ್ಕೆ ಅಗತ್ಯವಾದ ತಾಂತ್ರಿಕ ಸಲಹೆಯನ್ನು ಸಂಘಟನೆಯು ನೀಡುತ್ತಿದೆ’ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ್, ಮಧುಸೂದನ್‌ರಾವ್, ಪ್ರೊ.ಸಿದ್ದಪ್ಪ, ಎಂಜಿನಿಯರ್ಸ್ ಅಸೋಸಿಯೇಷನ್ ಪದಾಧಿಕಾರಿಎಂ.ವಿ.ರಾಜು ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.