
ತುಮಕೂರು: ಹುಳಿಯಾರು ಹೋಬಳಿ ಕೆಂಕೆರೆ ಬಳಿ ತೋಟದ ಮನೆಯಲ್ಲಿ ಮಂಜುನಾಥ್ ಎಂಬುವರನ್ನು ಕೊಲೆ ಮಾಡಿದ್ದ ನಾಲ್ವರು ಅಂತರರಾಜ್ಯ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೊಬ್ಬನ ಬಂಧನಕ್ಕೆ ಬಲೆ ಬೀಸಿದ್ದಾರೆ.
ತಮಿಳುನಾಡಿನ ಹೊಸೂರು ಬಳಿಯ ಬತ್ತಲಪಲ್ಲಿಯ ಚಾಲಕ ಸತೀಶ್ ಕುಮಾರ್ (40), ಸೇಲಂ ತಾಲ್ಲೂಕಿನ ಕಡಗತ್ತೂರು ಗ್ರಾಮದ ಕೇಶವನ್ (43), ದಿಂಡಿಗಲ್ ಜಿಲ್ಲೆಯ ಎರಮನಾಯಕಬಟ್ಟಿ ಗ್ರಾಮದ ಕವಿತೇಶ್ವರನ್ (22), ಸಂಬತಿ ಗ್ರಾಮದ ಅರುಣ್ ಪ್ರಶಾಂತ (26) ಬಂಧಿತರು.
ಆರೋಪಿಗಳಿಂದ ಕಾರು, ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಕೊಲೆ ನಡೆದ ಎರಡು ದಿನಗಳಲ್ಲೇ ದರೋಡೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಜುನಾಥ್ ವಾಸವಿದ್ದ ತೋಟದ ಮನೆಗೆ ನುಗ್ಗಿ ಡಕಾಯಿತಿಗೆ ಯತ್ನಿಸಿದ್ದು, ಅದು ಸಾಧ್ಯವಾಗದೆ ಕೊಲೆ ಮಾಡಿ ಪರಾರಿಯಾಗಿದ್ದರು. ಹೆದ್ದಾರಿ ಸಮೀಪ, ಒಂಟಿ ಮನೆಗಳು, ತೋಟದ ಮನೆಗಳ ಮೇಲೆ ದಾಳಿ ನಡೆಸಿ ದರೋಡೆ ಮಾಡುತ್ತಿದ್ದರು. ಕೆಂಕೆರೆಯಲ್ಲೂ ದರೋಡೆಗೆ ಮುಂದಾಗಿದ್ದು, ಮಂಜುನಾಥ್ ಕಿರುಚಿಕೊಂಡಿದ್ದರಿಂದ ಕೊಲೆ ಮಾಡಿ ಪರಾರಿಯಾಗಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದರು.
ಕೆಂಕೆರೆಯಲ್ಲಿ ಶಾಮಿಯಾನ ಅಂಗಡಿ ನಡೆಸುತ್ತಿದ್ದ ಮಂಜುನಾಥ್, ತೋಟದಲ್ಲಿ ಮನೆ ನಿರ್ಮಿಸಿಕೊಂಡು ವಾಸವಿದ್ದರು. ಜ. 11ರ ರಾತ್ರಿ 8.30 ಗಂಟೆ ಸಮಯದಲ್ಲಿ ಕೆಲವರು ಮನೆಯ ಬಳಿಗೆ ಬಂದಿದ್ದು, ‘ಕಳ್ಳರು ಬಂದಿದ್ದಾರೆ, ಬನ್ನಿ ಚಿಕ್ಕಪ್ಪ’ ಎಂದು ಮಕ್ಕಳು ಕೂಗಿಕೊಂಡಿದ್ದಾರೆ. ಮನೆಯ ಹೊರಗೆ ಇಬ್ಬರು ಹೆಣ್ಣು ಮಕ್ಕಳ ಜತೆಗೆ ಮಂಜುನಾಥ್ ಕುಳಿತಿದ್ದರು. ಹಿರಿಯ ಮಗಳು, ಮಂಜುನಾಥ್‌ನನ್ನು ಐವರು ಹಿಡಿದುಕೊಂಡು ಬಾಯಿ ಮುಚ್ಚಿಕೊಂಡಿದ್ದಾರೆ. ಒಬ್ಬ ಮಗಳು ಮನೆ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಮನೆ ಬಾಗಿಲು ತೆಗೆಸುವಂತೆ ಒತ್ತಾಯಿಸಿದ್ದು, ಬಾಗಿಲು ತೆಗೆಯದಿದ್ದಾಗ ಕೊಲೆ ಮಾಡಿ ಪರಾರಿಯಾಗಿದ್ದರು. ಮುಖ ಕಾಣದಂತೆ ಮುಚ್ಚಿಕೊಂಡಿದ್ದರು.
‘ಕೂಗಾಟ ಕೇಳಿ ನಾನು ಸ್ಥಳಕ್ಕೆ ಬಂದು ನೋಡುವುದರ ಒಳಗೆ ಕೊಲೆ ಮಾಡಿ ಪರಾರಿಯಾಗಿದ್ದರು’ ಎಂದು ಮೃತನ ಸಹೋದರ ದೂರು ನೀಡಿದ್ದರು.
ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಅವರು ಆರೋಪಿಗಳ ಬಂಧನಕ್ಕೆ ನೆರವಾಗಿದ್ದಾರೆ. ಎಎಸ್‌ಪಿಗಳಾದ ಪುರುಷೋತ್ತಮ್, ಗೋಪಾಲ್, ತಿಪಟೂರು ಡಿವೈಎಸ್‌ಪಿ ಯಶ್‌ಕುಮಾರ್ ಶರ್ಮ ಮಾರ್ಗದರ್ಶನ, ಚಿಕ್ಕನಾಯಕನಹಳ್ಳಿ ಇನ್‌ಸ್ಪೆಕ್ಟರ್ ಪಿ.ಆರ್.ಜನಾರ್ದನ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಶಿರಾ ಇನ್‌ಸ್ಪೆಕ್ಟರ್ ವಿ.ಪ್ರವೀಣ್ ಕುಮಾರ್, ತುಮಕೂರು ಜಯನಗರ ಠಾಣೆ ಪಿಎಸ್‍ಐ ತಿರುಮಲೇಶ್, ಹಂದನಕೆರೆಯ ಚಿತ್ತರಂಜನ್, ಶಿರಾ ಠಾಣೆ ಸಿಬ್ಬಂದಿಗಳಾದ ನಾಗರಾಜು, ಭಕ್ತಕುಂಬಾರ್, ಕೆಂಚರಾಯಪ್ಪ, ಮಂಜುನಾಥಸ್ವಾಮಿ, ಜಯನಗರ ಠಾಣೆ ಸಿಬ್ಬಂದಿಗಳಾದ ಚಂದ್ರನಾಯ್ಕ, ಅರುಣ್ ಕುಮಾರ್, ಮನುಶಂಕರ್ ತಂಡದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.