ADVERTISEMENT

ರಾಜಕೀಯ ಧ್ರುವೀಕರಣಕ್ಕೆ ಸಿದ್ಧವಾಯಿತೇ ವೇದಿಕೆ?

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮನೆಯಲ್ಲಿ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 4:26 IST
Last Updated 21 ಡಿಸೆಂಬರ್ 2020, 4:26 IST
ಕೆ.ಎನ್.ರಾಜಣ್ಣ
ಕೆ.ಎನ್.ರಾಜಣ್ಣ   

ತುಮಕೂರು: ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ ಜಿಲ್ಲೆಯಲ್ಲಿ ರಾಜಕೀಯ ಧ್ರುವೀಕರಣಕ್ಕೆ ಈಗಾಗಲೇ ವೇದಿಕೆಗಳು ಸಿದ್ಧಗೊಳ್ಳುತ್ತಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರ ಮನೆಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಹಾಜರಾಗುವ ಮೂಲಕ ಈ ಧ್ರುವೀಕರಣದ ಸುಳಿವು ನೀಡಿದ್ದಾರೆ. ಎಸ್‌.ಆರ್.ಶ್ರೀನಿವಾಸ್ ಸೇರಿದಂತೆ ಜೆಡಿಎಸ್‌ನ ಕೆಲವು ನಾಯಕರು ಕಾಂಗ್ರೆಸ್ ಸೇರುವರು ಎನ್ನುವ ಸುದ್ದಿ ಈ ಹಿಂದಿನಿಂದಲೂ ಹಬ್ಬಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎನ್‌.ರಾಜಣ್ಣ, ‘ಬಿಜೆಪಿ ಸರ್ಕಾರ ಜನಪರವಾಗಿಲ್ಲ. ಗೋಹತ್ಯೆ ನಿಷೇಧ ಕಾಯ್ದೆ ಸೇರಿದಂತೆ ಹಲವು ಕಾಯ್ದೆಗಳು ಜನವಿರೋಧಿಯಾಗಿವೆ. ಜಿಲ್ಲೆಯಲ್ಲಿಯೂ ಅಭಿವೃದ್ಧಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ರಾಜ್ಯ ಸರ್ಕಾರ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಗಮನ ನೀಡಬೇಕು’ ಎಂದು ಆಗ್ರಹಿಸಿದರು.

ತುಮಕೂರು ರಾಯದುರ್ಗ ನಡುವಿನ ರೈಲ್ವೆ ಯೋಜನೆ ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿದೆ. ಭೂಸ್ವಾಧೀನ ಆಗದೆ ಕಾಮಗಾರಿಗಳು ನಡೆಯುತ್ತಿಲ್ಲ. ತಕ್ಷಣವೇ ಭೂಸ್ವಾಧೀನ ಮಾಡಿಕೊಂಡು ಯೋಜನೆ ಪೂರ್ಣಗೊಳಿಸಬೇಕು. ಮಧುಗಿರಿ, ಕೊರಟಗೆರೆ, ಪಾವಗಡ ಮತ್ತು ಶಿರಾ ಒಳಗೊಂಡಂತೆ ಮಧುಗಿರಿ ಜಿಲ್ಲೆಯನ್ನು ಮಾಡಬೇಕು. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಘೋಷಿಸಿದ್ದ ಮಧುಗಿರಿ ಏಕಶಿಲಾ ಬೆಟ್ಟಕ್ಕೆ ಕೇಬಲ್ ಕಾರ್ ಅಳವಡಿಕೆ ಯೋಜನೆಯನ್ನು ಸರ್ಕಾರ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ದೇವೇಗೌಡರ ಬಗ್ಗೆ ಗೌರವ ಇದೆ. ನನ್ನ ಒಮ್ಮೆ ಅವರು ಶಾಸಕನನ್ನಾಗಿ ಮಾಡಿದ್ದರು. ಆ ಋಣ ಇದೆ. ಆದರೆ ದೇವೇಗೌಡರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ಬಿಜೆಪಿ ಅಭ್ಯರ್ಥಿ ಬಸವರಾಜ್ ಅವರನ್ನು ಬೆಂಬಲಿಸಿದೆ. ಗೌಡರ ಅಕ್ಕ ಪಕ್ಕ ಇದ್ದವರು ನಮ್ಮ ಮೇಲೆ ಚಾಡಿ ಹೇಳಿದರು. ನಾವು ದೂರವಾದೆವು. ಈ ವಯಸ್ಸಿನಲ್ಲಿಯೂ ದೇವೇಗೌಡರ ಹೋರಾಟ ಗುಣವನ್ನು ನಾನು ಮೆಚ್ಚುವೆ’ ಎಂದರು.

ಶಾಸಕ ಶ್ರೀನಿವಾಸ್ ಮಾತನಾಡಿ, ‘ನನಗೆ ಕೆ.ಎನ್.ರಾಜಣ್ಣ ಅವರು ಗಾಢ್ ಪಾದರ್. ಇದು ರಾಜಕೀಯ ಸುದ್ದಿಗೋಷ್ಠಿ ಅಲ್ಲ. ರಾಜಣ್ಣ ಕರೆದಿದ್ದಾರೆ ಬಂದೆ. ಇಂದಿನ ರಾಜಕೀಯ ಬೆಳವಣಿಗೆಗಳನ್ನು ನೋಡುತ್ತಿದ್ದು ಇವುಗಳಿಂದ ದೂರವೂ ಇದ್ದೇನೆ’ ಎಂದರು.

‘ಶಿರಾ ಉಪಚುನಾವಣೆಯನ್ನು ಯಾವ ರೀತಿ ಮಾಡಬೇಕು ಎಂದು ಪಕ್ಷದ ವರಿಷ್ಠರಿಗೆ ಹೇಳಿದೆ. ಆದರೆ 15 ದಿನ ಸುಮ್ಮನಿದ್ದು ನಂತರ ಚುನಾವಣೆ ಗೆಲ್ಲಿ ಎಂದರು‌.‌ ಈ ರೀತಿಯಲ್ಲಿ ಚುನಾವಣೆ ಗೆಲ್ಲಲು ಸಾಧ್ಯವೇ ಎಂದು ಅವರಿಗೇ ಹೇಳಿದೆ. ನನ್ನದು ನೇರ ರಾಜಕರಣ’ ಎಂದು ಜೆಡಿಎಸ್ ವರಿಷ್ಠರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜ್, ಚಿಕ್ಕನಾಯಕಹಳ್ಳಿ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಸಹ ಕಾಂಗ್ರೆಸ್ ಸೇರುವ ಹಾದಿಯಲ್ಲಿ ಇದ್ದಾರೆ ಎನ್ನುವ ಸುದ್ದಿ ಜೆಡಿಎಸ್‌ನಲ್ಲಿಯೇ ಕೇಳಿ ಬರುತ್ತಿದೆ.

ಮಾಜಿ ಶಾಸಕ ಷಫೀ ಅಹಮ್ಮದ್, ಗಂಗಣ್ಣ ಸುದ್ದಿಗೋಷ್ಠಿಯಲ್ಲಿ ಇದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.