ADVERTISEMENT

ಅಭಿವೃದ್ಧಿ ಸಾಧನೆ ವಿಜ್ಞಾನ, ತಂತ್ರಜ್ಞಾನ ಅವಶ್ಯ: ಕಿರಣ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 7:08 IST
Last Updated 12 ಜನವರಿ 2026, 7:08 IST
ಕೋಟನಾಯಕನಹಳ್ಳಿ ರುದ್ರಮುನಿ ಸ್ವಾಮೀಜಿ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆ ವಾರ್ಷಿಕ ಸಮಾರೋಪ ನಡೆಯಿತು
ಕೋಟನಾಯಕನಹಳ್ಳಿ ರುದ್ರಮುನಿ ಸ್ವಾಮೀಜಿ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆ ವಾರ್ಷಿಕ ಸಮಾರೋಪ ನಡೆಯಿತು   

ತಿಪಟೂರು: 2047ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ನೂರು ವರ್ಷ ಪೂರೈಸುತ್ತದೆ. ದೇಶವನ್ನು ಪ್ರಪಂಚದಲ್ಲಿ ಶ್ರೇಷ್ಠ ಸ್ಥಾನಕ್ಕೆ ತಲುಪಿಸುವ ಗುರಿ ಇದೆ. ಈ ಗುರಿ ಸಾಧನೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಕಿರಣ್‌ಕುಮಾರ್ ಅಭಿಪ್ರಾಯಪಟ್ಟರು.

ಅವರು ತಾಲ್ಲೂಕಿನ ಕೋಟನಾಯಕನಹಳ್ಳಿ ರುದ್ರಮುನಿ ಸ್ವಾಮೀಜಿ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆ ವಾರ್ಷಿಕ ಸಮಾರೋಪದಲ್ಲಿ ಮಾತನಾಡಿದರು. ಸ್ವಾತಂತ್ರ್ಯ ಬಂದ ಸಮಯದಲ್ಲಿ ದೇಶದ ಸ್ಥಿತಿ ಕಠಿಣವಾಗಿತ್ತು ಎಂದು ಸ್ಮರಿಸಿದರು. ಆ ನಂತರ ಸರ್ಕಾರದ ಮೊದಲ ಆದ್ಯತೆ ಎಲ್ಲರಿಗೂ ಶಿಕ್ಷಣ, ಆಹಾರ ಮತ್ತು ವಸತಿ ಒದಗಿಸುವುದಾಗಿತ್ತು ಎಂದರು.

‘ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ಮಕ್ಕಳು ದೇಶದ ಭವಿಷ್ಯ. ಮಕ್ಕಳಿಗೆ ಲಭಿಸುವ ವಿದ್ಯಾಭ್ಯಾಸ ಮತ್ತು ಸಂಸ್ಕಾರ ದೇಶದ ದಿಕ್ಕು ನಿರ್ಧರಿಸುತ್ತದೆ. ಮೊದಲ ಪ್ರಯತ್ನದಲ್ಲಿ ವಿಫಲತೆ ಕಂಡರೂ ನಿರಂತರ ಪ್ರಯತ್ನ ಮತ್ತು ಸಾಮರ್ಥ್ಯದ ಸರಿಯಾದ ಬಳಕೆಯಿಂದ ಯಶಸ್ಸು ಸಾಧ್ಯ’ ಎಂದು ತಿಳಿಸಿದರು.

ADVERTISEMENT

1975ರಲ್ಲಿ ಇಸ್ರೊ ತನ್ನ ಉಪಗ್ರಹವನ್ನು ಉಡಾವಣೆ ಮಾಡಿ ಗ್ರಾಮೀಣ ಪ್ರದೇಶಗಳಿಗೆ ಮಾಹಿತಿ ತಲುಪಿಸುವ ಕಾರ್ಯ ಆರಂಭಿಸಿತು ಎಂದು ಸ್ಮರಿಸಿದ ಅವರು, ‘ಉಪಗ್ರಹಗಳ ಮೂಲಕ ಹವಾಮಾನ ಮಾಹಿತಿ, ಚಂಡಮಾರುತ ಮುನ್ಸೂಚನೆ, ಕೃಷಿ ಮಾರ್ಗದರ್ಶನ, ಮೀನುಗಾರಿಕೆ ಮಾಹಿತಿ ದೊರಕುತ್ತಿದೆ. ಇದು ದೇಶದ ದೊಡ್ಡ ಸಾಧನೆ’ ಎಂದರು.

ಹಲವು ರಾಷ್ಟ್ರಗಳು ಬಾಹ್ಯಾಕಾಶ ತಂತ್ರಜ್ಞಾನವನ್ನು ಸೇನಾ ಉದ್ದೇಶಕ್ಕೆ ಬಳಸಿದರೆ, ಭಾರತ ಅದನ್ನು ಜನಸಾಮಾನ್ಯರ ಹಿತಕ್ಕಾಗಿ ಬಳಸುತ್ತಿದೆ ಎಂದರು. 

ಆದಿತ್ಯ-ಎಲ್1 ಮತ್ತು ಮಂಗಳ ಉಪಗ್ರಹ ಯೋಜನೆಗಳು ಜಗತ್ತಿನ ಗಮನ ಸೆಳೆದಿವೆ. ಮಕ್ಕಳ ಕುತೂಹಲಕಾರಿ ಪ್ರಶ್ನೆಗಳನ್ನು ಪೋಷಕರು ಮತ್ತು ಶಿಕ್ಷಕರು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಮಠಗಳು ದೇಶದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿವೆ ಎಂದರು.

ಪ್ರಾಥಮಿಕ ಶಿಕ್ಷಣ ಅತ್ಯಂತ ಮಹತ್ವದ್ದಾಗಿದೆ. ಅದನ್ನು ಸಾರ್ಥಕವಾಗಿ ನಿರ್ವಹಿಸುವ ಶಿಕ್ಷಣ ಸಂಸ್ಥೆಗಳು ಮತ್ತು ಮಠಗಳ ಸೇವೆ ಶ್ಲಾಘನೀಯ. ಗ್ರಾಮೀಣ ಮತ್ತು ಬಡ ಮಕ್ಕಳಿಗೆ ಶಿಕ್ಷಣ ನೀಡಲು ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

ತಿಪಟೂರಿಗೆ ಮೆಡಿಕಲ್ ಕಾಲೇಜು ಸ್ಥಾಪನೆ ಅಗತ್ಯವಿದೆ. ಈ ಭಾಗದಲ್ಲಿ ತೆಂಗಿನಕಾಯಿ ಹೊರತುಪಡಿಸಿ ಕೈಗಾರಿಕೆಗಳ ಕೊರತೆ ಇದೆ. ಜನರ ಜೀವನಮಟ್ಟ ಸುಧಾರಿಸಲು ಮೆಡಿಕಲ್ ಕಾಲೇಜು ಅಗತ್ಯ ಎಂದರು.

ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ ಮಾತನಾಡಿ, ರೈಲ್ವೆ ಸಚಿವ ಸೋಮಣ್ಣ ಅವರ ಕಾರ್ಯವೈಖರಿ ಮುಂದಿನ ದಿನಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗುವ ಅವಕಾಶ ತರಬಹುದು ಎಂದು ಆಶೀರ್ವಾದ ನೀಡಿದರು.

ಕಾರ್ಯಕ್ರಮದಲ್ಲಿ ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ, ಕಾಂಗ್ರೆಸ್ ಯುವ ಘಟಕದ ಜಿಲ್ಲಾ ಅಧ್ಯಕ್ಷ ನಿಖಿಲ್ ರಾಜಣ್ಣ, ಸುರೇಶ್ ಹೋಗನಘಟ್ಟ, ಯೋಗಾನಂದ ಮೂರ್ತಿ, ಆಡಳಿತಾಧಿಕಾರಿ ರಶ್ಮಿನಿರಂಜನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರಾಜ್ಯದ ರೈಲ್ವೆ ಯೋಜನೆಗಳಿಗೆ ಒತ್ತು 

‘ರೈಲ್ವೆ ಇಲಾಖೆ ಕಳೆದ 11 ವರ್ಷಗಳಲ್ಲಿ 100 ವರ್ಷಗಳ ಸಾಧನೆ ಮಾಡಿದೆ. ಹಳ್ಳಿಗಾಡಿನ ಜೀವನ ಬದಲಾಯಿಸಲು ರೈಲ್ವೆ ಪ್ರಮುಖ ಪಾತ್ರ ವಹಿಸುತ್ತಿದೆ. ತಾಲ್ಲೂಕಿನಲ್ಲಿ ಆರು ಕೆಳ ಸೇತುವೆ ಮತ್ತು 28 ಮೇಲ್ಸೇತುವೆಗಳನ್ನು ₹1100 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಒಂದು ವರ್ಷದೊಳಗೆ ಲೋಕಾರ್ಪಣೆ ಮಾಡಲಾಗುವುದು. ತುಮಕೂರು-ದಾವಣಗೆರೆ ಮತ್ತು ರಾಯದುರ್ಗ-ತುಮಕೂರು ರೈಲು ಯೋಜನೆಗಳು ರಾಜ್ಯ ಸರ್ಕಾರದ ಸಹಕಾರದಲ್ಲಿ ನಡೆಯುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.