ADVERTISEMENT

ಇಂದು ಹಲಸಿನ ದಿನ: ರಾಷ್ಟ್ರಮಟ್ಟದಲ್ಲಿ ಜನಪ್ರಿಯವಾಗುತ್ತಿವೆ ಹಲಸಿನ ಖಾದ್ಯಗಳು

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 5:07 IST
Last Updated 4 ಜುಲೈ 2020, 5:07 IST
ಹಲಸು
ಹಲಸು    

ತೋವಿನಕೆರೆ: ಇಂದು (ಜುಲೈ 4) ಹಲಸಿನ ಹಣ್ಣಿನ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಹಣ್ಣಿನ ಬಳಕೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತಿದೆ.

ಅಂತೆಯೇ ತುಮಕೂರು ಜಿಲ್ಲೆ ಹಲಸಿನ ತವರೂರು ಎಂದು ಹೇಳಿದರೆ ತಪ್ಪಾಗಲಾರದು. ಹಾದಿ ಬೀದಿಯಲ್ಲಿ ಬಿದ್ದು ಕೊಳೆತುಹೋಗುವ ಈ ಹಣ್ಣನ್ನು ಜಿಲ್ಲೆಯ ಜನ ಆರ್ಥಿಕ ದೃಷ್ಟಿಯಿಂದ ನೋಡಿಲ್ಲ. ಈಗ ಕಾಲ ಸಂಪೂರ್ಣ ಬದಲಾಗಿದೆ. ಹಣ್ಣಿನ ಜತೆ ಬೀಜವೂ ತೂಕದ ಲೆಕ್ಕಕ್ಕೆ ಮಾರಾಟವಾಗುವ ಸಮಯ ಬಂದಿದೆ. ಹಲಸಿನ ಖಾದ್ಯಗಳಿಗೆ ರಾಷ್ಟ್ರ ಮನ್ನಣೆಯೂ ಸಿಗುತ್ತಿದೆ.

ಗುಬ್ಬಿ ತಾಲ್ಲೂಕು ಚೇಳೂರು ಹಲಸಿನ ಮಾರುಕಟ್ಟೆ ಕೆಲವು ವರ್ಷಗಳಿಂದ ದೇಶದ ಗಮನ ಸೆಳೆದಿದೆ. ಚೇಳೂರು ಸಮೀಪದ ಸೀಗೇನಹಳ್ಳಿ ಸಿದ್ದಪ್ಪ ಅವರ ಮರದ ಕಸಿ ಗಿಡಗಳು ‘ಸಿದ್ದು ಹಲಸು’ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ. ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರದವರು ದೇಶದಲ್ಲಿ ಪ್ರಥಮ ಬಾರಿಗೆ ರೈತನ ಹೆಸರಿನಲ್ಲಿ ಸಿದ್ದು ಸಸಿಗಳನ್ನು ಬಿಡುಗಡೆ ಮಾಡಿದರು. ಮಾರಾಟದಿಂದ ಬಂದ ಹಣದಲ್ಲಿ ಶೇ 75 ಭಾಗವನ್ನು ರೈತನಿಗೆ ನೀಡುತ್ತಿದ್ದಾರೆ. ಸಿದ್ದು ಜತೆ ತಿಪಟೂರು ತಾಲ್ಲೂಕಿನ ಶಂಕರ ಹೆಸರಿನ ಹಲಸಿನ ಸಸಿಗಳೂ ಜನಪ್ರಿಯವಾಗುತ್ತಿವೆ.

ADVERTISEMENT

ಹೆಸರುಘಟ್ಟದ ಐಐಎಚ್ಆರ್ ನಿರ್ದೇಶಕ ಡಾ.ದಿನೇಶ್, ಮುಖ್ಯಸ್ಥ ಕರುಣಾಕರಣ್ ಮಾರ್ಗದರ್ಶನದಲ್ಲಿ ತುಮಕೂರು ಸಮೀಪದ ಹೀರೆಹಳ್ಳಿಯಲ್ಲಿ ಹಲಸಿನ ವಿವಿಧ ತಳಿಗಳನ್ನು ಬೆಳೆಸುವ ಪ್ರಯತ್ನ ನಡೆಯುತ್ತಿದೆ.

ಜಿಲ್ಲೆಯ ತೋವಿನಕೆರೆ ಸುತ್ತಮುತ್ತಲಿನ ಪ್ರದೇಶಗಳಿಂದ ನವೆಂಬರ್‌ನಿಂದ ಫೆಬ್ರುವರಿವರೆಗೂ ಪ್ರತಿ ದಿನ ಒಂದು ಟನ್ ಎಳೆ ಹಲಸಿನ ಕಾಯಿಗಳು ಹೊರ ರಾಜ್ಯಗಳಿಗೆ ರವಾನೆ ಆಗುತ್ತವೆ.

ತೋವಿನಕೆರೆ ಹಳ್ಳಿಸಿರಿ ಸಂಘದ ಮಹಿಳೆಯರು ಹಲಸಿನಿಂದ ಐವತ್ತಕ್ಕೂ ಖಾದ್ಯಗಳನ್ನು ತಯಾರುಮಾಡಿ ರಾಜ್ಯದ ಗಮನ ಸೆಳೆದಿದ್ದಾರೆ. ಸಂಘದವರು ತಯಾರು ಮಾಡಿದ್ದ ಹಲಸಿನ ಶಾವಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿತ್ತು. ಮುಂದಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಹಲಸು ಉತ್ತಮ ಆದಾಯ ತರುವ ಬೆಳೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.