
ತುಮಕೂರು ಹೊರ ವಲಯದ ಅಗಳಕೋಟೆಯಲ್ಲಿರುವ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಸಾಹೇ’ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಪಾವಗಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಜಪಾನಂದ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ತುಮಕೂರು: ದೇಶದಲ್ಲಿ ಬಡತನ ಕಡಿಮೆಯಾಗುತ್ತಿದೆ. ಆದರೆ ಅಸಮಾನತೆ ಹೆಚ್ಚುತ್ತಿದೆ ಎಂದು ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಆತಂಕ ವ್ಯಕ್ತಪಡಿಸಿದರು.
ನಗರದ ಹೊರ ವಲಯದ ಅಗಳಕೋಟೆಯಲ್ಲಿರುವ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಸಾಹೇ) ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದರು.
ಅಸಮಾನತೆ ಹೆಚ್ಚುತ್ತಿರುವುದು ದೇಶದ ಅಭಿವೃದ್ಧಿಗೆ ಪೆಟ್ಟು ನೀಡುತ್ತಿದೆ. ಭಾರತೀಯರು ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುತ್ತಾರೆ. ಅಂತಹ ವೈವಿಧ್ಯ ಸಮಾಜದಲ್ಲಿ ಬಿರುಕು ಮೂಡದಂತೆ ಯುವ ಜನತೆ ಎಚ್ಚರ ವಹಿಸಬೇಕಿದೆ. ಎಂದೂ ವಿಭಜಿಸುವ ಕೆಲಸ ಮಾಡಬಾರದು. ಅಸಹಿಷ್ಣುತೆ, ಅಸಮಾನತೆ ದೂರವಾದಾಗ ಮಾತ್ರ ದೇಶ ಪ್ರಗತಿಯ ವೇಗ ಹೆಚ್ಚಾಗಲು ಸಾಧ್ಯವಾಗಲಿದೆ ಎಂದು ಸಲಹೆ ಮಾಡಿದರು.
ವೈವಿಧ್ಯಮಯ ಜಾತಿ, ಧರ್ಮ, ಆಚಾರ, ವಿಚಾರ, ಪದ್ಧತಿಗಳನ್ನು ಹೊಂದಿರುವ ನಮ್ಮ ಸಮಾಜದಲ್ಲಿ ಹೊಸ ವಿಚಾರಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಯುವಜನತೆ ಮುಂದಾಗಬೇಕು. ದೇಶವನ್ನು ರಾಜಕೀಯ, ಧಾರ್ಮಿಕ ವಿಚಾರಗಳಿಂದ ಗುರುತಿಸುವ ಬದಲು ವಿಜ್ಞಾನ, ಅಧ್ಯಾತ್ಮದ ಮೂಲಕ ನೋಡುವಂತಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಜಪಾನ್, ಯುರೋಪ್ ದೇಶಗಳಲ್ಲಿ ಜನಸಂಖ್ಯೆ ಪ್ರಮಾಣ ಕಡಿಮೆಯಾಗಿದ್ದು, ಚೀನಾದಲ್ಲಿ ನಿಯಂತ್ರಣದಲ್ಲಿದೆ. ಆದರೆ ಭಾರತದಲ್ಲಿ ಹೆಚ್ಚಳವಾಗುತ್ತಲೇ ಸಾಗಿದ್ದು, ಇದು ಅಭಿವೃದ್ಧಿಗೆ ಮಾರಕವಾಗಿದೆ. ದೇಶದ ಜನಸಂಖ್ಯೆ 150 ಕೋಟಿಗೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಳವಾಗಲಿದೆ. ಬೆಳೆಯುತ್ತಿರುವ ಜನಸಂಖ್ಯೆಗೆ ಇರುವ ಸಂಪನ್ಮೂಲ ಸಾಲದಾಗಿದ್ದು, ಅದರ ರಕ್ಷಣೆಗೆ ಮುಂದಾಗಬೇಕಿದೆ. ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಪ್ರಕೃತಿ, ಪರಿಸರ ಸಂರಕ್ಷಣೆ ಮಾಡಬೇಕಿದೆ ಎಂದು ಹೇಳಿದರು.
ಪಾವಗಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಜಪಾನಂದ, ಭಾರತೀಯ ವಿಜ್ಞಾನ ಸಂಸ್ಥೆ ನಿವೃತ್ತ ಪ್ರಾಧ್ಯಾಪಕ ಕೆ.ಪಿ.ಜೆ.ರೆಡ್ಡಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಸಾಹೇ ವಿಶ್ವವಿದ್ಯಾಲಯ ಕುಲಾಧಿಪತಿ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರು ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್ ಪದವಿ ಪಡೆದ 1,086 ಮಂದಿಗೆ ಪದವಿ ಪ್ರಮಾಣ ಪತ್ರ ವಿತರಿಸಿದರು.
ಸಾಹೇ ವಿ.ವಿ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ವಿ.ವಿ ಪ್ರಗತಿ ನೋಟದ ವರದಿ ಮಂಡಿಸಿದರು.
ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಟ್ರಸ್ಟಿಗಳಾದ ಕನ್ನಿಕಾ ಪರಮೇಶ್ವರ, ಡಾ.ಜಿ.ಎಸ್.ಆನಂದ್, ಕುಲಸಚಿವರಾದ ಅಶೋಕ್ ಮೆಹತಾ, ಪರೀಕ್ಷಾಂಗ ನಿಯಂತ್ರಕ ಸಿ.ಗುರುಶಂಕರ್, ಪ್ರಾಂಶುಪಾಲ ಡಾ.ಬಿ.ಪ್ರವೀಣ್ ಕುಡುವ, ಉಪ ಪ್ರಾಂಶುಪಾಲ ಡಾ.ಜಿ.ಎನ್.ಪ್ರಭಾಕರ್, ಉಪ ಕುಲಸಚಿವ ಸುದೀಪ್ ಕುಮಾರ್, ಟಿ.ಬೇಗೂರು ಸಿದ್ಧಾರ್ಥ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ದಿವಾಕರ್, ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಎಂ.ಎಸ್.ರವಿಪ್ರಕಾಶ, ಕುಲಾಧಿಪತಿ ಸಲಹೆಗಾರ ವಿವೇಕ್ ವೀರಯ್ಯ ಮೊದಲಾದವರು ಭಾಗವಹಿಸಿದ್ದರು.
ಸ್ತ್ರೀ ಶಿಕ್ಷಣದ ಸವಾಲು
ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ವಿಜ್ಞಾನಿ ಪ್ರೊ.ಕೆ.ಪಿ.ಜೆ.ರೆಡ್ಡಿ ‘ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ದೊಡ್ಡ ಸವಾಲಾಗಿದೆ’ ಎಂದು ಹೇಳಿದರು. ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಪ್ರಯತ್ನ ಆರಂಭವಾಗಿದೆ. ಹಳ್ಳಿ ಭಾಗದಲ್ಲಿ ವಿಶ್ವವಿದ್ಯಾಲಯ ತೆರೆಯುವ ಆಶಯ ಮುಂದಿನ ದಿನಗಳಲ್ಲಿ ಸಾಧ್ಯವಾಗಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.