ADVERTISEMENT

ಜಕಣಾಚಾರ್ಯರ ಅಸ್ತಿತ್ವದ ಪ್ರಶ್ನೆ ಎಷ್ಟು ಸರಿ?: ವಾಸುದೇವ ಬಡಿಗೇರ

​ಪ್ರಜಾವಾಣಿ ವಾರ್ತೆ
Published 2 ಜನವರಿ 2024, 7:10 IST
Last Updated 2 ಜನವರಿ 2024, 7:10 IST
ತುಮಕೂರಿನಲ್ಲಿ ಸೋಮವಾರ ಜಕಣಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನೀಲಕಂಠಾಚಾರ್ಯ ಸ್ವಾಮೀಜಿ, ಉಪವಿಭಾಗಾಧಿಕಾರಿ ಗೌರವ್‍ಕುಮಾರ್ ಶೆಟ್ಟಿ, ಸಮುದಾಯದ ಮುಖಂಡರಾದ ಕೆ.ವಿ.ಕೃಷ್ಣಮೂರ್ತಿ, ಕೆ.ಎಸ್.ಪ್ರಭಾಕರ್, ಕೆ.ಎಸ್.ಸಿದ್ಧಲಿಂಗಪ್ಪ ಮೊದಲಾದವರು ಉಪಸ್ಥಿತರಿದ್ದರು
ತುಮಕೂರಿನಲ್ಲಿ ಸೋಮವಾರ ಜಕಣಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನೀಲಕಂಠಾಚಾರ್ಯ ಸ್ವಾಮೀಜಿ, ಉಪವಿಭಾಗಾಧಿಕಾರಿ ಗೌರವ್‍ಕುಮಾರ್ ಶೆಟ್ಟಿ, ಸಮುದಾಯದ ಮುಖಂಡರಾದ ಕೆ.ವಿ.ಕೃಷ್ಣಮೂರ್ತಿ, ಕೆ.ಎಸ್.ಪ್ರಭಾಕರ್, ಕೆ.ಎಸ್.ಸಿದ್ಧಲಿಂಗಪ್ಪ ಮೊದಲಾದವರು ಉಪಸ್ಥಿತರಿದ್ದರು   

ತುಮಕೂರು: ‘ಅಮರಶಿಲ್ಪಿ ಜಕಣಾಚಾರ್ಯರ ಅಸ್ತಿತ್ವವೇ ಇಲ್ಲವೆಂದು ಕೆಲವು ಸಂಶೋಧಕರು ವಾದಿಸುತ್ತಾರೆ. ಅವರ ಅಸ್ತಿತ್ವವನ್ನು ಪ್ರಶ್ನಿಸುವ ಕೆಲಸಕ್ಕೆ ಯಾರೂ ಕೈಹಾಕಬಾರದು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಾಧ್ಯಾಪಕ ವಾಸುದೇವ ಬಡಿಗೇರ ಸಲಹೆ ಮಾಡಿದರು.

ಜಿಲ್ಲಾ ಆಡಳಿತ, ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ, ಸಮುದಾಯದ ಸಂಘ, ಸಂಸ್ಥೆಗಳ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಮರಶಿಲ್ಪಿ ಜಕಣಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಕಣಾಚಾರ್ಯರ ಅಸ್ವಿತ್ವವನ್ನು ಪ್ರಶ್ನಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಕೇಳಿದರು.

ಇತಿಹಾಸದ ಎಷ್ಟೋ ದಾಖಲೆಗಳು, ಶಾಸನಗಳು, ದೇಗುಲಗಳು ಮಣ್ಣಿನಲ್ಲಿ ಹುದುಗಿ ಹೋಗಿವೆ. ಆಕರಗಳು ಲಭ್ಯವಿಲ್ಲ ಎಂದ ಮಾತ್ರಕ್ಕೆ ಇತಿಹಾಸದ ಸತ್ಯಗಳನ್ನು ಮರೆಮಾಚಲು ಸಾಧ್ಯವಿಲ್ಲ. ಮುಂದೆ ಆಕರಗಳು ಲಭ್ಯವಾಗಬಹುದು ಎಂಬುದನ್ನು ಪ್ರಬುದ್ಧ ಸಂಶೋಧಕರು ಸಮಾಜಕ್ಕೆ ತಿಳಿಸಬೇಕು. ಜಕಣಾಚಾರ್ಯರ ಬಗ್ಗೆ ಶಾಸನಗಳಲ್ಲಿ ಉಲ್ಲೇಖವಿದೆ. ಕೆತ್ತಿದ ಶಿಲ್ಪಕಲಾ ಕೃತಿಗಳು ಸಾಕ್ಷಿಯಾಗಿ ನಿಂತಿವೆ. ಅವರ ಕೊಡುಗೆ ಜನಮಾನಸದಲ್ಲಿದೆ. ಜಕಣಾಚಾರ್ಯರ ಪರಂಪರೆಯು ನೂರಾರು ವರ್ಷಗಳ ಕಾಲ ಶಿಲ್ಪಕಲೆಯಲ್ಲಿ ಬೆಳಗಿದೆ ಎಂದು ಸ್ಮರಿಸಿದರು.

ADVERTISEMENT

ಐಎಎಸ್‍ ನಿವೃತ್ತ ಅಧಿಕಾರಿ ಕೆ.ಎಸ್.ಪ್ರಭಾಕರ್, ‘ನಾಡಿನ ಶಿಲ್ಪಕಲಾ ಸಂಸ್ಕೃತಿಯನ್ನು ಸಾಕಾರಗೊಳಿಸಿದವರಲ್ಲಿ ಅಮರಶಿಲ್ಪಿ ಜಕಾಣಾಚಾರ್ಯರು ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರ ಅಸ್ತಿತ್ವವನ್ನೇ ಪ್ರಶ್ನೆ ಮಾಡುತ್ತಿರುವುದು ದುರದೃಷ್ಟಕರ. ಜಕಣಾಚಾರ್ಯರು ಕೆತ್ತಿದ ಶಿಲ್ಪಗಳು, ನಿರ್ಮಿಸಿ ದೇವಸ್ಥಾನಗಳು ಅವರ ಅಸ್ತಿತ್ವ, ಕಲಾ ಕೌಶಲಕ್ಕೆ ಸಾಕ್ಷಿಯಾಗಿವೆ. ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕೆ’ ಎಂದು ಪ್ರಶ್ನಿಸಿದರು.

ಮಧುಗಿರಿ ತಾಲ್ಲೂಕು ನಿಟ್ರಳ್ಳಿ ವಿಶ್ವಕರ್ಮ ಸಂಪನ್ಮೂಲ ಮಠದ ಪೀಠಾಧ್ಯಕ್ಷ ನೀಲಕಂಠಾಚಾರ್ಯ ಸ್ವಾಮೀಜಿ, ‘ವಿಶ್ವಮರ್ಕ ಸಮುದಾಯದ ಸಂಸ್ಕೃತಿ, ಪರಂಪರೆ, ಕುಲಕಸುಬಿನ ಮಹತ್ವಗಳ ಬಗ್ಗೆ ಈಗಿನ ತಲೆಮಾರಿನವರು ಅರಿತು, ಮುಂದುವರಿಸಿಕೊಂಡು ಹೋಗಬೇಕು. ಸಮಾಜದವರು ಸಂಘಟಿತರಾಗಿ ಸಂಕಷ್ಟದಲ್ಲಿರುವ ಸಮುದಾಯದವರನ್ನು ಮೇಲೆತ್ತುವ ಕಾರ್ಯದಲ್ಲಿ ನೆರವಾಗಬೇಕು’ ಎಂದು ಹೇಳಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಪ್ರಾಧ್ಯಾಪಕರಾದ ಗಂಗಾಧರ್ ದೈವಜ್ಞ, ಕೊಟ್ರೇಶ್, ಉಪವಿಭಾಗಾಧಿಕಾರಿ ಗೌರವ್‍ಕುಮಾರ್ ಶೆಟ್ಟಿ, ತಹಶೀಲ್ದಾರ್ ಸಿದ್ದೇಶ್, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಧನಿಯಾಕುಮಾರ್, ಪತ್ರಕರ್ತ ಎಸ್.ನಾಗಣ್ಣ, ವಿಶ್ವಕರ್ಮ ಸಮುದಾಯದ ಮುಖಂಡರಾದ ಗೋವರ್ಧನಾಚಾರ್, ಉಮೇಶಾಚಾರ್, ಗುರುರಾಜಾಚಾರ್, ಗಂಗರಾಜಾಚಾರ್, ಹರೀಶ್‍ ಆಚಾರ್ಯ, ಶಶಿಧರ್, ಜಿ.ಎನ್.ಎಂ.ಆಚಾರ್ಯ ಮತ್ತಿತರರು ಭಾಗವಹಿಸಿದ್ದರು. ಶಿಲ್ಪಿಗಳಿಗೆ ಜಕಣಾಚಾರ್ಯರ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಶಿಲ್ಪಕಲಾ ತರಬೇತಿ ಸಂಸ್ಥೆಗೆ ಬೇಡಿಕೆ

ಜಕಣಾಚಾರ್ಯರು ತುಮಕೂರು ಸಮೀಪದ ಕೈದಾಳ ಗ್ರಾಮದಲ್ಲಿ ಜನಿಸಿ ಅಲ್ಲಿಯೇ ದೇವಸ್ಥಾನ ನಿರ್ಮಿಸಿ ಅದ್ಭುತ ಮೂರ್ತಿಯನ್ನು ಕೆತ್ತಿ ನಿಲ್ಲಿಸಿದ್ದಾರೆ. ಹಾಗಾಗಿ ಈ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ವಿಶ್ವಕರ್ಮ ಸಾಹಿತ್ಯ ಪರಿಷತ್‍ ಅಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ ಆಗ್ರಹಿಸಿದರು. ಕೈದಾಳ ಗ್ರಾಮದಲ್ಲಿ ಶಿಲ್ಪಕಲಾ ತರಬೇತಿ ಸಂಸ್ಥೆ ಸ್ಥಾಪಿಸಬೇಕು. ಅಲ್ಲಿನ ಸಮುದಾಯ ಭವನದಲ್ಲಿ ಶಿಲ್ಪ ನಿರ್ಮಾಣ ಕಾರ್ಯಾಗಾರಗಳನ್ನು ನಡೆಸುವ ಮೂಲಕ ಜಕಣಾಚಾರ್ಯರ ಕೊಡುಗೆಯ ನಿರಂತರ ಸ್ಮರಣೆ ನಡೆಯಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.