ADVERTISEMENT

ಮಳೆಯಿಂದ ಬೆಳೆ ನಷ್ಟವಾಗಿದ್ರೆ ಲೆಕ್ಕ ಬರೆದುಕೊಂಡು ಪರಿಹಾರ ಕೊಡಲಾಗದು: ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 12:21 IST
Last Updated 3 ಸೆಪ್ಟೆಂಬರ್ 2022, 12:21 IST
ಜೆ.ಸಿ.ಮಾಧುಸ್ವಾಮಿ
ಜೆ.ಸಿ.ಮಾಧುಸ್ವಾಮಿ   

ಮಧುಗಿರಿ: ಮಳೆಯಿಂದ ಬೆಳೆ ನಷ್ಟವಾಗಿದ್ದರೆ ಲೆಕ್ಕ ಬರೆದುಕೊಂಡು ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಕಾನೂನು, ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಇಲ್ಲಿ ಶನಿವಾರ ಹೇಳಿದರು.

ಮಳೆಯಿಂದ ಹಾನಿಯಾಗಿರುವ ಕೆರೆಗಳನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ರೈತರಿಗೆ ಆಗುವ ಬೆಳೆ ನಷ್ಟವನ್ನು ಸರ್ಕಾರ ತುಂಬಿ ಕೊಡುವುದಿಲ್ಲ. ರೈತರು ನೀಡುವ ಲೆಕ್ಕಾಚಾರಗಳಿಗೆಲ್ಲ ಪರಿಹಾರ ಕೊಡಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ಬೆಳೆ ನಷ್ಟಕ್ಕೆ ನೀಡುತ್ತಿರುವ ಪರಿಹಾರ ಏನೇನೂ ಸಾಲದಾಗಿದ್ದು, ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ರೈತರು ಒತ್ತಾಯಿಸುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.

ADVERTISEMENT

‘ಇದರ ಹೆಸರೇ ಪರಿಹಾರ. ರೈತರಿಗಾದ ನಷ್ಟವನ್ನೆಲ್ಲ ತುಂಬಿಸಿ ಕೊಡುವುದಿಲ್ಲ. ಆಕಸ್ಮಿಕವಾಗಿ ತೊಂದರೆಯಾದಾಗ ಪರಿಹಾರವನ್ನಷ್ಟೇ ನೀಡಲಾಗುತ್ತದೆ. ಬೆಳೆ ವಿಮೆ ವ್ಯವಸ್ಥೆಗೆ ಹೋಗಬೇಕು. ವಿಮೆ ಮಾಡಿಸಿ ಆ ಮೂಲಕ ಪರಿಹಾರ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.