ತುಮಕೂರು: ಈಗಿನ ಚುನಾವಣೆ ವ್ಯವಸ್ಥೆ ಬಗ್ಗೆ ಎಲ್ಲರಿಗೂ ಬೇಸರವಾಗಿದೆ. ಮುಂದಿನ ದಿನಗಳನ್ನು ನೆನಪಿಸಿಕೊಂಡರೆ ಆತಂಕವಾಗುತ್ತದೆ ಎಂದು ಸಂಯುಕ್ತ ಜನತಾದಳ (ಜೆಡಿಯು) ರಾಜ್ಯ ಘಟಕದ ಅಧ್ಯಕ್ಷ ಮಹಿಮಾ ಪಟೇಲ್ ಇಲ್ಲಿ ಸೋಮವಾರ ಹೇಳಿದರು.
ಚುನಾವಣೆ ವ್ಯವಸ್ಥೆ ಹಾಗೂ ಹಾಳಾಗಿರುವ ಆಡಳಿತ, ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸುವವರು ಯಾರು? ಎಂಬ ಪ್ರಶ್ನೆ ಎಲ್ಲರ ಮುಂದೆ ಇದೆ. ಈ ಬಗ್ಗೆ ಎಲ್ಲರೂ ಯೋಚಿಸಿದರೆ ಮಾತ್ರ ಸುಧಾರಣೆ ತರಲು ಸಾಧ್ಯವಾಗಲಿದೆ. ಇಲ್ಲವಾದರೆ ವ್ಯವಸ್ಥೆ ಮತ್ತಷ್ಟು ಹಾಳಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿಯನ್ನಾಗಿ ಕೆ.ನಾಗರಾಜು ಅವರನ್ನು ಆಯ್ಕೆ ಮಾಡಿದ್ದು, ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಈ ಚುನಾವಣೆಯನ್ನು ಭ್ರಷ್ಟಾಚಾರ ರಹಿತವಾಗಿಯೇ ನಡೆಸುತ್ತೇವೆ. ಸೋಲು– ಗೆಲುವಿಗಿಂತ ಸರಿಯಾದ ಮಾರ್ಗದಲ್ಲಿ, ಪಾರದರ್ಶಕವಾಗಿ ಸಾಗುವುದೇ ನಮ್ಮ ಉದ್ದೇಶವಾಗಿದೆ. ಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಜತೆ ಮೈತ್ರಿ ಮಾಡಿಕೊಂಡಿಲ್ಲ. ಅವರ ಬೆಂಬಲ ಕೋರುತ್ತೇವೆ. ಸ್ಪಂದನೆ ಸಿಗದಿದ್ದರೆ ಜೆಡಿಯು ಪ್ರತ್ಯೇಕವಾಗಿ ಸ್ಪರ್ಧಿಸಲಿದೆ ಎಂದರು.
ನಮ್ಮ ತಂದೆ ಮಾಜಿ ಮುಖ್ಯಮಂತ್ರಿ ದಿ.ಜೆ.ಎಚ್.ಪಟೇಲ್ ಜನ್ಮದಿನ ಹಾಗೂ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಅ. 12ರಂದು ನಗರದ ಕನ್ನಡ ಭವನದಲ್ಲಿ ಚಿಂತನ- ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿವಿಧ ಕ್ಷೇತ್ರಗಳ ಸಾಧಕರು, ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ. ‘ವ್ಯವಸ್ಥೆ ಸುಧಾರಣೆಗೆ ತಾವೇನು ಕೊಡುಗೆ ಕೊಡುತ್ತೇವೆ’ ಎಂಬ ಬಗ್ಗೆ ಚರ್ಚೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಆರ್.ರಂಗನಾಥ್, ಮುಖಂಡರಾದ ಕೆ.ನಾಗರಾಜು, ಎಚ್.ಸಿ.ಸುರೇಶ್, ಡಿ.ಜೆ.ಪ್ರಭು, ಮೋಹನ್, ಪರಮೇಶ್ ಸಿಂಧಗಿ, ಮಂಜುನಾಥ್, ಮೈನಾವತಿ, ಶಾಂತಕುಮಾರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.